Untitled Document
Sign Up | Login    
ಧನಂಜಯನ ಕಥಾ ಪ್ರಸಂಗ... ಜಯನಗರ 4th ಬ್ಲಾಕ್....

ಜಯನಗರ 4th ಬ್ಲಾಕ್....

ತೊಂಭತ್ತು ಲಕ್ಷಕ್ಕೂ ಹೆಚ್ಚು ಜೀವರಾಶಿಗಳ ಪಾಲಿನ ಶಾಮಿಯಾನಾದಂತಿರುವ ಮಹಾನಗರಿ ನಮ್ಮ ಬೆಂಗಳೂರು. ಗುರುತು ಪರಿಚಯಗಳಿಲ್ಲದಿದ್ದರೂ ತಮ್ಮ ಕನಸಿನ ಮೂಟೆಗಳನ್ನು ಹೊತ್ತ ನೂರಾರು ಜೀವಗಳು ಇಲ್ಲಿಗೆ ಪ್ರತಿದಿನವೂ ಬರುತ್ತವೆ. ಕನಸುಗಳ ಬೆನ್ನು ಬಿದ್ದು, ಅವುಗಳನ್ನು ಸಾಕಾರಗೊಳಿಸಿಕೊಳ್ಳುವ ಶ್ರಮದಲ್ಲಿ ಹತಾಶವಾಗುವ ಮನಸುಗಳಿಗೆ, ಒಂದು ಬೊಗಸೆಯಷ್ಟು ಭರವಸೆಯನ್ನು ತುಂಬಿ, ಪುನಶ್ಚೇತನಗೊಳಿಸಬಲ್ಲಂಥ ಔಷಧಿಯೇ... ಈ ಕನಸಿನ ಯಾನದಲ್ಲಿ ಜೊತೆಯಾಗುವ ಸ್ನೇಹ. ಇಂಥ ಅಪರೂಪದ ಸ್ನೇಹಕ್ಕೆ ವೇದಿಕೆಯಾಗಬಲ್ಲಂಥ ಎಷ್ಟೋ ಜಾಗಗಳು ಈ ಮಹಾನಗರಿಯಲ್ಲಿವೆ.

ಇಂಥಹ ಒಂದು ಸ್ಥಳವನ್ನೇ ಹಿನ್ನೆಲೆಯಾಗಿಟ್ಟುಕೊಂಡು, ಹತ್ತಾರು ಕನ್ನಡದ ಮನಸುಗಳ ಒಂದು ಹೊಸ ತಂಡ ಕನ್ನಡ ಕಲರ‍್ಸ್ ಎಂಬ ನಿರ್ಮಾಣ ಸಂಸ್ಥೆ ಹುಟ್ಟುಹಾಕಿ, ಕಿರುಚಿತ್ರವೊಂದನ್ನು ತಯಾರಿಸಿದೆ. ಅದರ ಹೆಸರು ’ಜಯನಗರ ಫೋರ್ತ್ ಬ್ಲಾಕ್. ಕೇವಲ ಆರು ಮುಖ್ಯಪಾತ್ರಗಳನ್ನಷ್ಟೇ ಹೊಂದಿರುವ ಈ ಕಿರುಚಿತ್ರದ ಅವಧಿ ಇಪ್ಪತ್ತೇಳು ನಿಮಿಷಗಳು.

ಜಯನಗರ ಬಡಾವಣೆಯ ಮುಖ್ಯರಸ್ತೆ ಬದಿಯ ಕಲ್ಲುಬೆಂಚುಗಳು, ಅಲ್ಲಿ ಚಿತ್ರನಟನಾಗಲು ಪರ ಊರಿನಿಂದ ಬಂದು ಅವಕಾಶಗಳಿಗಾಗಿ ಅರಸಿ ತುಸು ಹತಾಶನಾದಂತೆ ಕಂಡು ಬರುವ ಕಥಾನಾಯಕ ಧನಂಜಯ, ಸಾಯಂಕಾಲಗಳಲ್ಲಿ ಹೊತ್ತು ಕಳೆಯಲು, ತನ್ನ ಓರಗೆಯ ಗೆಳೆಯರೊಡನೆ ಮಾತನಾಡಲು ಬರುವ ಹಿರಿಯ ವೆಂಕಿ, ಹೂವು ಮಾರುತ್ತಲೇ ಮಗ್ಗಿ ಕಲಿತು ವೆಂಕಿಯ ಸ್ನೇಹ ಬೆಳೆಸಿರುವ ಪುಟ್ಟ ಹುಡುಗಿ ರಾಣಿ, ತಮಾಷೆಯ ಮಾತಿನಿಂದಲೇ ನಾಯಕನಲ್ಲೊಂದು ಸಣ್ಣ ಆತ್ಮವಿಶ್ವಾಸ ಹುಟ್ಟಿಸುವ ಮಂಗಳಮುಖಿ, ಇವಿಷ್ಟು ಪಾತ್ರಗಳೊಡನೆ ಸಾಗುವ ಕಥೆಗೆ ಪೂರಕವಾಗಿ ರಸ್ತೆ ಬದಿಯ ವ್ಯಾಪಾರಿಗಳ ಪರಸ್ಪರ ಪರಿಚಯ-ಪ್ರೇಮದ ಉಪಕಥೆಗಳಿವೆ. ಹೀಗೇ ಎಲ್ಲರಿಗೂ ತಮ್ಮದೆನಿಸುವ ಕಥಾಹಂದರವೇ ಚಿತ್ರದ ಆತ್ಮ.
ಈಗಾಗಲೇ ಬೆಂಗಳೂರಿನ ಎರಡು ಬೇರೆ ಬೇರೆ ಸ್ಥಳಗಳಲ್ಲಿ ಸಾರ್ವಜನಿಕ ಪ್ರದರ್ಶನ ಕಂಡಿರುವ ಈ ಕಿರುಚಿತ್ರವು ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ.

ನಗರದ ಮಲ್ಲೇಶ್ವರದ ರೇಣುಕಾಂಬ ಥಿಯೇಟರಿನಲ್ಲಿ, ಮಾಧ್ಯಮ ಹಾಗೂ ಗಣ್ಯರಿಗಾಗಿ ಏರ್ಪಡಿಸಿದ್ದ ಪ್ರದರ್ಶನದಲ್ಲಿ ಚಿತ್ರವನ್ನು ವೀಕ್ಷಿಸಿದ.ಟಿ.ಎಸ್.ನಾಗಾಭರಣ, ಬಿ.ಕೆ.ಎಸ್.ವರ್ಮ, ಕೃಪಾಕರ-ಸೇನಾನಿ, ಕಲಾಗಂಗೋತ್ರಿ ಮಂಜು ಮುಂತಾದ ಖ್ಯಾತನಾಮರು ಚಿತ್ರವನ್ನು ಮೆಚ್ಚಿಕೊಂಡು ಇಂಥಾ ಕಿರುಚಿತ್ರಗಳಿಗೆಂದೇ ನಮ್ಮಲ್ಲಿ ಸಮಾನಾಂತರ ಮಾರುಕಟ್ಟೆ ನಿರ್ಮಾಣವಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಜೊತೆಗೆ ಈ ಚಿತ್ರದ ಜೀವಾಳವೇ ಆಗಿರುವ ಜಯನಗರ ಫೋರ್ತ್ ಬ್ಲಾಕ್’ ನ ಅದೇ ರಸ್ತೆ ಬದಿಯಲ್ಲಿಯೇ, ಒಂದು ವಾರಾಂತ್ಯದ ಸಂಜೆ ಈ ಚಿತ್ರದ ಪ್ರದರ್ಶನವನ್ನು ಚಿತ್ರತಂಡ ಏರ್ಪಡಿಸಿತ್ತು. ಅದೇ ಕಲ್ಲುಬೆಂಚಿನ ಮೇಲೆ ಸಾಯಂಕಾಲಗಳಲ್ಲಿ ಹೊತ್ತು ಕಳೆಯುವ, ಎಲ್ಲ ವಯೋಮಾನದ, ಎಲ್ಲ ವರ್ಗದ ಜನಗಳೂ, ಈ ಅರ್ಧಘಂಟೆಯ ಕಿರುಚಿತ್ರವನ್ನು ಬಯಲಿನಲ್ಲಿ ದೊಡ್ಡ ಪರದೆಯ ಮೇಲೆ ವೀಕ್ಷಿಸುವ ಅಪರೂಪದ ಅನುಭವಕ್ಕೆ ಸಾಕ್ಷಿಯಾದರು. ಹೀಗೆ ’ಬಯಲು’ ಮತ್ತು ’ಆಲಯ’ ಎರಡರಲ್ಲೂ ನೋಡುಗರನ್ನು ಸೆಳೆದ ಈ ಕಿರುಚಿತ್ರವನ್ನು ಎಲ್ಲ ಆಸಕ್ತರಿಗೂ ತಲುಪಿಸುವ ಇರಾದೆ ಈ ಚಿತ್ರತಂಡದ್ದು.
ಆದ್ದರಿಂದ ಕಳೆದ ಡಿಸೆಂಬರ್ ಇಪ್ಪತ್ತೊಂಭತ್ತರ ಭಾನುವಾರದಿಂದ ಈ ಚಿತ್ರವು ’ಯೂಟ್ಯೂಬ್’ ನಲ್ಲಿ ಲಭ್ಯವಿದೆ. ಹಾಗೆ ಬ್ಯಾಂಗಳೂರ್ ವೇವ್ಸ ನಲ್ಲಿ ಕೂಡ ಲಭ್ಯವಿದೆ.(Click Here)

ಬಿಡುಗಡೆಯಾದ ಹತ್ತು ದಿನಗಳಲ್ಲೇ ಒಂದು ಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟ ’ಫೋರ್ತ್ ಬ್ಲಾಕ್’ ಕನ್ನಡದ ಕಿರುಚಿತ್ರ ಜಗತ್ತಿನಲ್ಲೊಂದು ಅಪರೂಪದ ದಾಖಲೆ. ಮೂಲ ಬೆಂಗಳೂರಿಗರಷ್ಟೇ ಅಲ್ಲದೇ, ಬೇರೆ ಬೇರೆ ಊರಿನ, ಬೇರೆ ಬೇರೆ ರಾಜ್ಯದ ಎಷ್ಟೋ ನೋಡುಗರು ಯೂಟ್ಯೂಬ್‌ನಲ್ಲಿ ಚಿತ್ರ ವೀಕ್ಷಿಸಿ, ಮೆಚ್ಚಿಕೊಂಡು ಪ್ರೋತ್ಸಾಹದ ಮಾತುಗಳನ್ನಾಡಿದ್ದಾರೆ. ಅಷ್ಟೇ ಅಲ್ಲದೇ ಹಲವಾರು ಅನಿವಾಸೀ ಭಾರತೀಯರು ಕೂಡಾ ಕರೆಮಾಡಿ ಅಭಿನಂದಿಸಿರುವುದು ತಂಡದ ಉತ್ಸಾಹವನ್ನು ಹೆಚ್ಚಿಸಿದೆ. ಇನ್ನು ಇದರ ಪಾತ್ರ ಹಾಗೂ ತಂತ್ರಜ್ಙವರ್ಗ ಬಹುತೇಕ ಹೊಸ ತಂಡ.

ಡಿ.ಸತ್ಯಪ್ರಕಾಶ್ ನಿರ್ದೇಶನವಿರುವ ಈ ಚಿತ್ರಕ್ಕೆ, ಕಥೆ-ಚಿತ್ರಕಥೆ-ಸಂಭಾಷಣೆ ಚಿತ್ರದ ನಾಯಕರಾಗಿರುವ ಧನಂಜಯರದ್ದೇ ಎನ್ನುವುದು ವಿಶೇಷ. ಛಾಯಾಗ್ರಹಣದಲ್ಲಿ ಲವಿತ್, ಹಿರಿಯ ಸಂಕಲನಕಾರ.ಬಿ.ಎಸ್.ಕೆಂಪರಾಜು ರವರ ಸಂಕಲನ, ಸ್ಟೀಫನ್ ಹರ್ಷರ ಸಂಗೀತವಿರುವ ಈ ಚಿತ್ರದ ನಿರ್ಮಾಣ ನಿರ್ವಹಣೆ ನಟರಾಜ್ ಎಸ್ ಭಟ್ ಮಾಡಿದ್ದಾರೆ.

ಪಾತ್ರವರ್ಗದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹೆಚ್.ಸಿ.ಸುಬ್ಬರಾವ್, ದಿವ್ಯ, ಪ್ರಿಯಾಂಕ, ಧರ್ಮಣ್ಣ ಕಡೂರು, ಬಿಂಬಶ್ರೀ ಇದ್ದಾರೆ.
ಹೀಗೇ ಹಲವಾರು ಹೊಸಬರ ಹಾಗೂ ಹಿರಿಯರ ಒಟ್ಟಾರೆ ಕೃಷಿಯೇ ಜಯನಗರ ಫೋರ್ತ್ ಬ್ಲಾಕ್.
ಜಯದ ನಾಯಕ ಧನಂಜಯ
'ಜಯ'ದ ನಾಯಕ ಧನಂಜಯ

ಇದರ ಕಥೆಯ ರೂವಾರಿ ಹಾಗೂ ಮುಖ್ಯಪಾತ್ರಧಾರಿ ಧನಂಜಯ ಈಗಾಗಲೇ ಗುರುಪ್ರಸಾದರ ’ಡೈರೆಕ್ಟರ್ ಸ್ಪೆಷಲ್’ ಚಿತ್ರದ ಮೂಲಕ ಕನ್ನಡ ’ಸಿನೀಮನೆ’ಯಲ್ಲಿ ಭರವಸೆ ಮೂಡಿಸಿರುವ ’ಸ್ಪೆಷಲ್ ಸ್ಟಾರ್’ ಮೂಲತಃ ಅರಸೀಕೆರೆಯವರು. ಮೈಸೂರಿನಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿರುವ ಈತ, ಕೆಲಕಾಲ ಇನ್ಫೋಸಿಸ್‌ನಲ್ಲೂ ಕೆಲಸ ನಿರ್ವಹಿಸಿದ್ದಾರೆ. ಸಾಹಿತ್ಯದಲ್ಲಿನ ಅಭಿರುಚಿ ಹಾಗೂ ರಂಗಭೂಮಿಯ ಒಡನಾಟ ಇವರನ್ನು ಚಿತ್ರರಂಗದ ಪಡಸಾಲೆಗೆ ತಂದು ನಿಲ್ಲಿಸಿದೆ. ಅಭಿನಯದ ಜೊತೆಜೊತೆಗೇ ಚೆಂದದ ಕಥೆ ಹೆಣೆಯಬಲ್ಲ, ಸುಂದರ ಕವನಗಳನ್ನು ಬರೆಯಬಲ್ಲ ಅಪರೂಪದ ಎರಕ ಈ ’ಸ್ಪೆಷಲ್ ಸ್ಟಾರ್’. ಒಂದರ್ಥದಲ್ಲಿ ಈ ಕಿರುಚಿತ್ರ ಇವರ ನೈಜ ಅನುಭವವೆ. ಅದಕ್ಕಾಗಿ ಚಿತ್ರದ ಅಡಿಬರಹದಲ್ಲಿ ಧನಂಜಯ ಕಥಾ ಪ್ರಸಂಗ ಎಂದೇ ಬಣ್ಣಿಸಲಾಗಿದೆ.
ಸೂತ್ರಧಾರ ಸತ್ಯ..
ಸೂತ್ರಧಾರ ಸತ್ಯ..

ಈ ಸುಂದರ ಚಿತ್ರಿಕೆಯ ಸೂತ್ರಧಾರ ’ನಿರ್ದೇಶಕ ಡಿ.ಸತ್ಯಪ್ರಕಾಶ್, ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರಿನವರಾದ ಇವರು ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣರ ಬಳಿ ಹಲವಾರು ವರ್ಷ ಸಹಾಯಕರಾಗಿದ್ದವರು. ಐತಿಹಾಸಿಕ ಹಿನ್ನೆಲೆಯ ಧ್ವನಿ ಮತ್ತು ಬೆಳಕು ಕಾರ್ಯಕ್ರಮಗಳಿಗೆ ಕೂಡ ಸಂಭಾಷಣೆ ಹಾಗೂ ರಂಗಸ್ಥಳದ ಹಿಂದೆ ಸಕ್ರಿಯರಾಗಿ ದುಡಿದಿದ್ದಾರೆ.ಇವರ ನಿರ್ದೇಶನದಲ್ಲೇ ಈ ಹಿಂದೆ ಮಂಪರೂ, ಹೀಗೂನಾ..? ಹಾಗು ಸಂ ಎಂಬ ಕಿರುಚಿತ್ರಗಳನ್ನು ಮಾಡಿದ್ದಾರೆ. ’ಸಂ’ ಚಿತ್ರಕ್ಕೆ ಜನಶ್ರೀ ವಾಹಿನಿಯ ಕಿರುಚಿತ್ರ ಸರಣಿ ಸ್ಫರ್ಧೆಯಲ್ಲಿ ಪ್ರಶಸ್ತಿಯೂ ಲಭಿಸಿತ್ತು. ಈಗಾಗಲೇ ಚಿತ್ರೀಕರಣ ಹಂತದಲ್ಲಿರುವ ’ಭಾಗ್ಯರಾಜ್’ ಹಾಗೂ ’ಎಂದೆಂದಿಗೂ’ ಚಿತ್ರಗಳ ಚಿತ್ರಕಥೆ ಹಾಗೂ ಸಂಭಾಷಣೆಗಳಲ್ಲಿ ತಮ್ಮನು ತೊಡಗಿಸಿಕೊಂಡಿದ್ದಾರೆ. ಧನಂಜಯರ ಕಥೆಯನ್ನು ಸುಂದರವಾಗಿ ತೆರೆಗೆ ತಂದು ಭರವಸೆ ಮೂಡಿಸಿರುವ ಸತ್ಯಪ್ರಕಾಶ್ ರವರು ಮುಂದೆ ಪೂರ್ಣ ಪ್ರಮಾಣದ ಚಲನಚಿತ್ರಗಳಿಗೆಂದೇ ಅಪರೂಪದ ಕಥೆಗಳೊಂದಿಗೆ ಸಿದ್ಧರಿದ್ದಾರೆ.

ಚಿತ್ರವನ್ನು ಇಲ್ಲಿ ವೀಕ್ಷಿಸಿ...
Click Here

 

Author : ನಟರಾಜ್ ಭಟ್

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited