Untitled Document
Sign Up | Login    
ಮರೆಯಾಗಿದ್ದ ಗೋಲಿ ಸೋಡಾ ಲಕ್ಷದೀಪೋತ್ಸವದಲ್ಲಿ ಪ್ರತ್ಯಕ್ಷ

ಗೋಲಿ ಸೋಡಾ

ಒಂದು ಕಾಲದಲ್ಲಿ ಸೋಡಾ ಹೆಸರು ಕೇಳಿದಾಗ ನೆನಪಾಗುತ್ತಿದ್ದದ್ದು ಗೋಲಿ ಸೋಡಾ ಮಾತ್ರವಾಗಿತ್ತು. ಆ ಸೋಡಾ ಬಾಟಲಿಯನ್ನು ತೆರೆಯುವುದೇ ಒಂದು ಮಜಾ. ಬೇಸಿಗೆ ಬಂದರಂತೂ ಗೋಲಿ ಸೋಡಾಕ್ಕೆ ಇನ್ನಿಲ್ಲದೆ ಬೇಡಿಕೆ. ಉರಿಬಿಸಿಲಲ್ಲಿ ಬಸ್ಸಿಗೆ ಗಂಟೆಗಟ್ಟಲೆ ಕಾದು ಬಾಯಾರಿದಾಗ ಅಥವಾ ಎರಡು ಕಿಲೋಮೀಟರ್ ನಡೆದು ಪೇಟೆಗೆ ಬಂದಾಗ ಮೊದಲು ನೆನಪಾಗುವುದೇ ಗೋಲಿ ಸೋಡಾ. ಕರಾವಳಿಯಲ್ಲಂತೂ ಗೋಲಿ ಸೋಡಾ ಅತ್ಯಂತ ಪ್ರಸಿದ್ಧ ಪಾನೀಯವಾಗಿತ್ತು. ಆದರೆ ಇಂದು ಗೋಲಿ ಸೋಡಾ ಅಂದರೆ ಏನು ಅಂತ ಕೇಳುವ ಪರಿಸ್ಥಿತಿ ಎದುರಾಗಿದೆ. ಈಗಿನ ತಲೆಮಾರಿನ ಮಕ್ಕಳಿಗೆ, ಯುವಕರಿಗೆ ಕೋಕ್, ಪೆಪ್ಸಿ ಗೊತ್ತೇ ವಿನಃ ಗೋಲಿ ಸೋಡಾ ಅಂದರೇನು ಅಂತ ಬಹುತೇಕರಿಗೆ ಗೊತ್ತಿಲ್ಲ. ಗೋಲಿ ಸೋಡಾ ಕಾಣಸಿಗುವುದೇ ಅಪರೂಪವಾಗಿಬಿಟ್ಟಿದೆ. ಆದರೆ ಸವಿದವರಿಗೆ ಮಾತ್ರ ಗೊತ್ತು ಗೋಲಿ ಸೋಡಾದ ಮಜಾ!.

ಹಾಗೆಂದು ನಿರಾಶರಾಗುವ ಅಗತ್ಯವಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದಲ್ಲಿ ನೀವು ಇನ್ನೊಮ್ಮೆ ಗೋಲಿ ಸೋಡಾದ ರುಚಿಯನ್ನು ಆಸ್ವಾದಿಸಬಹುದು. ಪರಮೇಶ್ವರ್ ಮತ್ತು ವಿಮಲಾ ದಂಪತಿ ಜನರಿಗೆ ಪುನಃ ಗೋಲಿ ಸೋಡಾದ ನೆನಪನ್ನು ತರುತ್ತಿದ್ದಾರೆ. ದೇವಸ್ಥಾನದ ಎದುರಿನ ದಾರಿಯಲ್ಲಿ ನೇರವಾಗಿ ಹೋದರೆ ಕೊನೆಯಲ್ಲಿ ಇವರ ಗೋಲಿ ಸೋಡಾದ ಒಂದು ಚಿಕ್ಕ ಮಳಿಗೆ ಇದೆ. ಪ್ರತಿ ವರ್ಷವೂ ಗೋಲಿ ಸೋಡಾದ ಮಳಿಗೆ ಹಾಕುವ ಇವರು ಹಲವಾರು ವರ್ಷಗಳಿಂದ ಇದರ ವ್ಯಾಪಾರ ಮಾಡುತ್ತಿದ್ದಾರೆ. ಗೋಲಿ ಸೋಡಾ ವ್ಯಾಪಾರದ ಬಗ್ಗೆ ಕೇಳಿದಾಗ ವಿಮಲಾ ಅವರು, 'ಮಕ್ಕಳಿಗೂ ಇದರ ಬಗ್ಗೆ ಖುಷಿ ಇದೆ, ಅವರಿಗೂ ಸೋಡಾ ಬಾಟಲಿಗೆ ತುಂಬಿಸುವುದು ಹಾಗೂ ಅದನ್ನು ತೆರೆಯುವ ಬಗ್ಗೆ ಕಲಿತುಕೊಂಡಿದ್ದಾರೆ ಎನ್ನುತ್ತಾರೆ'. ಇವರ ಮಕ್ಕಳು ಶಾಲೆಗೆ ಹೋಗುತ್ತಿದ್ದರೂ ಲಕ್ಷದೀಪದ ಸಂದರ್ಭದಲ್ಲಿ ಹೆತ್ತವರಿಗೆ ಸಹಾಯ ಮಾಡುತ್ತಿದ್ದಾರೆ.

ಇವರದೇ ಸ್ವಂತ ಉದ್ಯಮವಾದ ಇದನ್ನು ಲಕ್ಷದೀಪೋತ್ಸವದ ಸಂದರ್ಭದಲ್ಲಿ ಮಾತ್ರ ವ್ಯಾಪಾರ ಮಾಡುತ್ತಾರೆ. ಈ ಸೋಡಾ ಬಾಟಲಿಗೆ ಸೋಡಾ ತುಂಬಿಸುವ ಯಂತ್ರವು ಇವರಲ್ಲಿಯೇ ಇರುವುದರಿಂದ ಇವರಿಗೆ ಖರ್ಚು ಕಡಿಮೆ ಲಾಭವೂ ಹೆಚ್ಚು. ಈ ಗೋಲಿ ಸೋಡಾದಲ್ಲಿ ಅಪಾಯವೂ ಇರುವುದರಿಂದ ಇದರ ಬೇಡಿಕೆ ಕಡಿಮೆಯಾಗಿತ್ತು. ಆದರೆ ಪರಮೇಶ್ವರ್ ಪ್ರಕಾರ "ಬಾಟಲಿಗೆ ಸೋಡಾವನ್ನು ತುಂಬಿಸುವುದರ ಮೇಲೆ ಅಪಾಯವನ್ನು ಪರಿಗಣಿಸಬಹುದಷ್ಟೇ. ಅದಕ್ಕೆ ಇಂತಿಷ್ಟೇ ಸೋಡಾವನ್ನು ತುಂಬಿಸಬೇಕೆಂಬ ನಿಯಮವಿದೆ. ಅಷ್ಟನ್ನು ಮಾತ್ರವೇ ತುಂಬಿಸಬೇಕು. ಅದಕ್ಕಿಂತ ಹೆಚ್ಚಾದರಷ್ಟೇ ಬಾಟಲಿ ಸಿಡಿಯುವ ಸಂದರ್ಭವಿರುತ್ತದೆ. ಆದರೆ ಸೋಡಾ ಬಾಟಲಿಯನ್ನು ತೆರೆಯುವಾಗ ಅಪಾಯವೇನು ಇರುವುದಿಲ್ಲ ಎನ್ನುತ್ತಾರೆ.

ಲಕ್ಷದೀಪೋತ್ಸವದಲ್ಲಿ ಗೋಲಿ ಸೋಡಾ ಸವಿಯಲು ಮುಗಿಬಿದ್ದ ಜನರು..
'ಗೋಲಿ ಸೋಡಾದಲ್ಲಿ ಹಲವಾರು ವಿಧಗಳಿವೆ. ಆರೆಂಜ್, ಪೈನಾಪಲ್, ಲಿಂಬೂ, ಸಿಹಿ ಹೀಗೆ ಹಲವಾರು ವೆರೈಟಿಗಳಲ್ಲಿ ದೊರಕುತ್ತದೆ. ಇದು ಆರೋಗ್ಯದ ಮೇಲೆ ಇದು ಯಾವುದೇ ದುಷ್ಪರಿಣಾಮಗಳನ್ನು ಬೀರುವುದಿಲ್ಲ. ಅಲ್ಲದೆ, ಪಿತ್ತ, ಅಜೀರ್ಣ, ಗ್ಯಾಸ್ ಟ್ರಬಲ್‌ನಂತಹ ಎಲ್ಲಾ ಸಮಸ್ಯೆಗಳಿಗೂ ಇದು ರಾಮಬಾಣ. ದುರದೃಷ್ಟವೆಂದರೆ, ಆಧುನಿಕ ಯುಗದ ಥಳಕು ಬಳಕು ಜೀವನ ಶೈಲಿಗೆ ಮಾರುಹೋದ ಜನರಿಗೆ ಗೋಲಿ ಸೋಡಾದ ಬಗ್ಗೆ ತಾತ್ಸಾರ. ಅದು ಸ್ಥಳೀಯ ಪಾನೀಯ, ಬ್ರಾಂಡೆಡ್ ಸೋಡಾ ಅಲ್ಲ ಎಂಬಂತಹ ಅಭಿಪ್ರಾಯ ಇರುವುದರಿಂದ ಈಗ ಬೇಡಿಕೆ ಕಡಿಮೆಯಾಗಿದೆ. ಆದರೆ ಧರ್ಮಸ್ಥಳದ ಹೆಗ್ಗಡೆಯವರೇ ಈ ಮಳಿಗೆಯನ್ನು ಲಕ್ಷದೀಪೋತ್ಸವದಲ್ಲಿ ಹಾಕಬೇಕೆಂದು ಹೇಳಿದ್ದಾರೆ. ಹಾಗೂ ಸ್ವತಃ ಅವರೇ ಗೋಲಿ ಸೋಡಾವನ್ನು ನಮ್ಮಲ್ಲಿಂದ ತರಿಸಿ ಗೋಲಿ ಸೋಡಾ ಕುಡಿಯುತ್ತಾರೆ ಎನ್ನುತ್ತಾರೆ ಪರಮೇಶ್ವರ್ ದಂಪತಿ!.

ಗೋಲಿ ಸೋಡಾವನ್ನು ನೋಡದವರು, ಅದನ್ನು ಸವಿಯದವರು, ಹಾಗೂ ಇದರ ಬಗ್ಗೆ ತಿಳಿಯದವರಿಗೆ ಲಕ್ಷದೀಪೋತ್ಸವ ಒಂದು ಒಳ್ಳೆಯ ಅವಕಾಶ ಎನ್ನಬಹುದು.



(ಪೋಟೋ: ವಿಲ್ಸನ್ ಪಿಂಟೋ, ಎಸ್.ಡಿ.ಎಂ ಕಾಲೇಜು, ಉಜಿರೆ)

 

Author : ರಶ್ಮಿ ವಿನಾಯಕ್, ಎಸ್.ಡಿ.ಎಂ ಕಾಲೇಜ್ 

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited