ಶ್ರೀನಗರ : ಜಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಬಿಎಸ್ ಎಫ್ ಯೋಧರನ್ನು ಗುರಿಯಾಗಿಸಿಕೊಂಡು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ.
ಜಮ್ಮುವಿನ ಅಂತರಾಷ್ಟ್ರೀಯ ಗಡಿ ಭಾಗದ ಆರ್.ಎಸ್.ಪುರ ಸೆಕ್ಟರ್ ಹಾಗೂ ಅರ್ನಿಯಾ ಪ್ರದೇಶಗಳಲ್ಲಿ 22 ಬಿಎಸ್ ಫ್ ಸೇನಾ ಶಿಬಿರಗಳ ಮೇಲೆ ಹಾಗೂ ಗ್ರಾಮಸ್ಥರ ನಿವಾಸಗಳ ಮೇಲೆ ಪಾಕ್ ಸೇನೆ ಭಾರೀ ಪ್ರಮಾಣದ ಗುಂಡಿನ ದಾಳಿ ನಡೆಸಿದೆ. ಘಟನೆಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದರೆ, ಓರ್ವ ಯೋಧ ಹಾಗೂ ಮೂವರು ನಾಗರಿಕರು ಗಾಯಗೊಂಡಿದ್ದಾರೆ.
ಮಹಮ್ಮದ್ ಅಕ್ರಂ ಹಾಗೂ ಅವರ 13 ವರ್ಷದ ಮಗ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳಿಗೆ ಜಮ್ಮುವಿನ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಿಎಸ್ ಎಫ್ ಯೋಧರು ಕೂಡ ಪ್ರತಿದಾಳಿ ಮುಂದುವರೆಸಿದ್ದಾರೆ. ಪಾಕ್ ದಾಳಿಯಿಂದಾಗಿ ಹಲವು ಮನೆಗಳು ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 15 ದಿನಗಳಲ್ಲಿ ಪಾಕ್ ಸೇನೆ 19 ಬಾರಿ ಜಮ್ಮು-ಕಾಶ್ಮೀರದಲ್ಲಿ ಕದನ ವಿರಾಮ ಉಲ್ಲಘನೆ ಮಾಡಿದೆ.