BW News Bureau : ಮಾಸಿಕ ಶುಲ್ಕ ಇಳಿಸಲು ಕೇಬಲ್ ಟಿವಿ ಆಪರೇಟರ್ ಗಳಿಗೆ ವಾರ್ತಾ ಸಚಿವ ರೋಷನ್ ಬೇಗ್ 2 ತಿಂಗಳ ಗಡುವು ನೀಡಿದ್ದಾರೆ.
ಒಂದು ವೇಳೆ ಎರಡು ತಿಂಗಳಲ್ಲಿ ಮಾಸಿಕ ಶುಲ್ಕ ಇಳಿಸದಿದ್ದರೆ ಸರ್ಕಾರದಿಂದಲೇ ಕೇಬಲ್ ನೆಟ್ ವರ್ಕ್ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಶುಲ್ಕ ಇಳಿಕೆಗೆ ನಿರಾಕರಿಸಿರುವ ಕೇಬಲ್ ಆಪರೇಟರ್ ಗಳು ಟ್ರಾಯ್ ನಿಯಮಾವಳಿಗಳ ಪ್ರಕಾರ ರಾಜ್ಯ ಸರ್ಕಾರ ಕೇಬಲ್ ಸೇವೆ ನೀಡುವಂತಿಲ್ಲ, ಹಾಗದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಸಡ್ಡು ಹೊಡೆದಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕೇಬಲ್ ಆಪರೇಟರ್ಸ್ ಸಂಘದ ಸಭೆಯಲ್ಲಿ ಮಾತನಾಡಿದ ಸಚಿವರು, ಮಾಸಿಕ 350ರಿಂದ 400 ರೂ. ಶುಲ್ಕ ನಿಗದಿ ಮಡಿದ್ದು, ಇದು ಸಾರ್ವಜನಿಕರಿಗೆ ಹೊರೆಯಾಗಿದೆ. 100 ರೂ. ದರದಲ್ಲಿ ಕೇಬಲ್ ಸೇವೆ ದೊರೆಯಬೇಕು ಎಂಬುದು ಸರ್ಕಾರದ ಉದ್ದೇಶವಾಗಿದ್ದು, ಅದಕ್ಕೆತಕ್ಕಂತೆ ಎರಡು ತಿಂಗಳಲ್ಲಿ ಶುಲ್ಕ ಇಳಿಸಿ ಎಂದು ಕೇಬಲ್ ಆಪರೇಟರ್ ಗಳಿಗೆ ಸಚಿವರು ಸೂಚಿಸಿದ್ದಾರೆ.
ತಮಿಳುನಾಡಿನಲ್ಲಿ ಸರ್ಕಾರದವತಿಯಿಂದಲೇ ಕೇಬಲ್ ಸೇವೆ ಜಾರಿ ಮಾಡಿದ್ದು, 70 ರೂ.ದರದಲ್ಲಿ 100 ಚಾನಲ್ ಗಳನ್ನು ನೀಡಲಾಗುತ್ತಿದೆ. ನೀವು ಶುಲ್ಕ ಇಳಿಸದಿದ್ದರೆ ತಮಿಳುನಾಡು ಮಾದರಿಯಲ್ಲಿ ನಮ್ಮಲ್ಲೂ ಕೇಬಲ್ ಸೇವೆ ಒದಗಿಸಲು ಸರ್ಕಾರ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.