ನವದೆಹಲಿ : 'ಏರ್ ಇಂಡಿಯಾ' ದಿನಾಚರಣೆ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಕಂಪನಿ ತನ್ನ ಗ್ರಾಹಕರಿಗೆ ವಿನೂತನ ಆಫರ್ ನೀಡಿದ್ದು ಕೇವಲ 100ರೂಪಾಯಿಗೆ (ತೆರಿಗೆ ಹೊರತುಪಡಿಸಿ)ಟಿಕೆಟ್ ನೀಡುತ್ತಿದೆ.
ಇಂಡಿಯನ್ ಏರ್ ಲೈನ್ಸ್ ಮತ್ತು ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗಳು ವಿಲೀನಗೊಂಡ ವಾರ್ಷಿಕೋತ್ಸದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಈ ರೀತಿಯ ಕೊಡುಗೆ ನೀಡಲಾಗುತ್ತಿದೆ. ಎರಡೂ ಸಂಸ್ಥೆಗಳು ವಿಲೀನಗೊಂಡ ದಿನವನ್ನು ಏರ್ ಇಂಡಿಯಾ ದಿನವೆಂದು ಆಚರಿಸಲಾಗುತ್ತದೆ. 2007ರಲ್ಲಿ ಏರ್ ಇಂಡಿಯಾ ಸಂಸ್ಥೆಯೊಂದಿಗೆ ಇಂಡಿಯನ್ ಏರ್ ಲೈನ್ಸ್ ಸಂಸ್ಥೆ ವಿಲೀನಗೊಂಡಿತ್ತು. ಈ ಹಿನ್ನೆಲೆಯಲ್ಲಿ 5 ದಿನಗಳ ಕಾಲ 100 ರುಪಾಯಿಗೆ ಏರ್ ಟಿಕೆಟ್ ಗಳನ್ನು ಮಾರಾಟ ಮಾಡಲಾಗುತ್ತಿದೆ. ಆಫರ್ ರೇಟ್ ಟಿಕೆಟ್ ಮಾರಾಟ 31ರವರೆಗೆ ಚಾಲ್ತಿಯಲ್ಲಿ ಇರಲಿದೆ.
ಏರ್ ಇಂಡಿಯಾ ಸಂಸ್ಥೆಯ ವೆಬ್ ಸೈಟ್ ಮೂಲಕ ಮಾತ್ರ 100ರೂಪಾಯಿಗಳಿಗೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಆ.27ರಿಂದ ಸೆ.30ರವರೆಗಿನ ಪ್ರಯಾಣವನ್ನು ಮಾತ್ರ ಈ ಟಿಕೆಟ್ ಮೂಲಕ ಕಾದಿರಿಸಬಹುದಾಗಿದೆ ಎಂದು ಕಂಪನಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.
ಅಗ್ಗದ ದರದಲ್ಲಿ ಟಿಕೆಟ್ ಪಡೆಯುವ ಉದ್ದೇಶದಿಂದ ಅಪಾರ ಸಂಖ್ಯೆಯಲ್ಲಿ ಗ್ರಾಹಕರು ವೆಬ್ ಸೈಟ್‌ಗೆ ಲಗ್ಗೆ ಇಟ್ಟಿದ್ದಾರೆ. ಪರಿಣಾಮ ಏರ್ ಇಂಡಿಯಾ ಸೈಟ್ ಕ್ರ್ಯಾಶ್ ಆಗಿದೆ ಎಂದು ತಿಳಿದುಬಂದಿದೆ.