ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಗೊಂಡಿದೆ. ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷ ನಾಯಕ ಇಮ್ರಾನ್ ಖಾನ್ ಹಾಗೂ ತಾಹಿರ್ ಉಲ್ ಖಾದ್ರಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ.
ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ನವಾಜ್ ಷರೀಫ್ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ಇದರಿಂದಾಗಿ ಪ್ರತಿಭಟನೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನೆಯನ್ನು ರಾಷ್ಟ್ರಾದ್ಯಂತ ವ್ಯಾಪಿಸುವಂತೆ ಇಮ್ರಾನ್ ಖಾನ್ ಕರೆ ನೀಡಿದ್ದಾರೆ.
ಇಸ್ಲಾಮಾಬಾದ್ ನಲ್ಲಿ ಪ್ರತಿಭಟನೆ ಹೆಚ್ಚಿದ ಹಿನ್ನಲೆಯಲ್ಲಿ ಪೊಲೀಸರು ಧರಣಿ ನಿರತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ. ಇನ್ನೊಂದೆಡೆ ಪ್ರತಿಭಟನಾಕಾರರನ್ನು ಚದುರಿಸಲು ಗಾಳಿಯಲ್ಲಿ ಗುಂಡು, ಅಶ್ರುವಾಯು ಪ್ರಯೋಗಮಾಡಿದ್ದಾರಲ್ಲದೇ ಹಲವರನ್ನು ಬಂಧಿಸಿದ್ದಾರೆ.
ತಡರಾತ್ರಿಯಿಂದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಸಾವಿರಾರು ಪ್ರತಿಭಾನಾಕಾರರು ಲಾಠಿ ಹಿಡಿದು ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲೆತ್ನಿಸಿದರು. ಈ ವೇಳೆ ಭದ್ರತಾಪಡೆಗಳೊಂದಿಗಿನ ಸಂಘರ್ಷದಲ್ಲಿ 7 ಜನರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಪ್ರತಿಭಟನೆ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ.
ಪ್ರಧಾನಿ ನವಾಜ್ ಷರೀಫ್ ರಾಜೀನಾಮೆಗೆ ಆಗ್ರಹಿಸಿ ಇಮ್ರಾನ್ ಖಾನ್ ಹಾಗೂ ಖಾದ್ರಿ ನೇತೃತ್ವದಲ್ಲಿ ಬೆಂಬಲಿಗರು ಕಳೆದ 18ದಿನಗಳಿಂದ ಪಾಕಿಸ್ತಾನದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.