ನವದೆಹಲಿ : ಯುಟಿಲಿಟಿ ವಾಹನಗಳ ದಿಗ್ಗಜ ಮಹೀಂದ್ರಾ ಹಾಗೂ ಮಹೀಂದ್ರಾ ಯುರೋಪ್ ಮೂಲದ ಪಿಎಸ್ಎ ಪ್ಯೂಜಿಯೋತ್ ಸಿಟ್ರೊಯೆನ್ ನ ಸ್ಕೂಟರ್ ಕಂಪನಿಯನ್ನು ಖರೀದಿ ಮಾಡಲಿದೆ. ಈ ಸಂಬಂಧ ಉಭಯ ಕಂಪನಿಗಳ ನಡುವೆ ಅಂತಿಮ ಹಂತದ ಮಾತುಕತೆ ನಡೆದಿದೆ.
ಮಹೀಂದ್ರಾ ಕಂಪನಿ ಪಿಎಸ್ಎ ಪ್ಯೂಜಿಯೋತ್ ಕಂಪನಿಯ ಸ್ಕೂಟರ್ ವಿಭಾಗವನ್ನು ಖರೀದಿ ಮಾಡುವ ಸಂಬಂಧ ಶೀಘ್ರವೇ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ತಿಳಿದುಬಂದಿದೆ. ಯುಟಿಲಿಟಿ ವಾಹನಗಳನ್ನು ತಯಾರಿಸುತ್ತಿರುವ ಮಹೀಂದ್ರಾ ಕಂಪನಿ 2008ರಲ್ಲಿ ಪ್ರಥಮ ಬಾರಿಗೆ ದ್ವಿಚಕ್ರ ವಾಹನ ತಯಾರಿಕೆಯನ್ನು ಪ್ರಾರಂಭಿಸಿತ್ತು. ಇದೀಗ ಯುರೋಪ್ ನ ಪ್ರತಿಷ್ಠಿತ ವಾಹನ ತಯಾರಿಕಾ ಕಂಪನಿಯ ದ್ವಿಚಕ್ರ ವಾಹನ ತಯಾರಿಕಾ ವಿಭಾಗವನ್ನು ಮಹೀಂದ್ರಾ ಕಂಪನಿ ಖರೀದಿಸುತ್ತಿರುವುದರಿಂದ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಇತರ ಕಂಪನಿಗಳಿಗೆ ತೀವ್ರ ಪೈಪೋಟಿಯೊಡ್ಡುವ ಸಾಧ್ಯತೆ ಇದೆ.
ಪ್ರಮುಖವಾಗಿ ಭಾರತದ ರಸ್ತೆಗಳಲ್ಲಿ ಅತಿ ಹೆಚ್ಚು ಕಂಡು ಬರುವ ಹಿರೋ ಮೋಟೋ ಕಾರ್ಪ್, ಹೋಂಡಾ ಮೋಟರ್ ಕಂಪನಿಗಳಿಗೆ ಮಹೀಂದ್ರಾ ಕಂಪನಿ ಪ್ರಬಲ ಪೈಪೋಟಿ ನೀಡಲಿದೆ.
ಪಿಎಸ್ಎ ಪ್ಯೂಜಿಯೋತ್ ಕಂಪನಿ ಕಳೆದ ಒಂದು ದಶಕದಿಂದ ತೀವ್ರ ನಷ್ಟ ಅನುಭವಿಸುತ್ತಿದೆ. ಸ್ಕೂಟರ್ ತಯಾರಿಕಾ ಘಟಕದಲ್ಲಿ ಫ್ರಾನ್ಸ್ ನ 500 ಜನ ಹಾಗೂ ಚೀನಾದ 300ಜನ ಕೆಲಸ ನಿರ್ವಹಿಸುತ್ತಿದ್ದಾರೆ.