ಸಿಡ್ನಿ : 'ಐ.ಎಸ್.ಐ.ಎಸ್' ಉಗ್ರ ಸಂಘಟನೆಯೊಂದಿಗೆ ಸಮರಕ್ಕಿಳಿದಿರುವ ಆಸ್ಟ್ರೇಲಿಯಾ ಸಾರ್ವಜನಿಕವಾಗಿ ಜನರ ತಲೆ ಕತ್ತರಿಸುವ ಯೋಜನೆ ರೂಪಿಸಿದ್ದ 15 ಶಂಕಿತ ಐ.ಎಸ್.ಐ.ಎಸ್ ಬೆಂಗಲಿಗರನ್ನು ಬಂಧಿಸಿದೆ.
ಆಸ್ಟ್ರೇಲಿಯಾ ಉಗ್ರ ನಿಗ್ರಹ ಪೊಲೀಸರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಈ ಬಗ್ಗೆ ವಿವರ ನೀಡಿರುವ ಪ್ರಧಾನಿ ಟೋನಿ ಅಬಾಟ್, ಬಂಧಿತರು ಐ.ಎಸ್.ಐ.ಎಸ್ ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದರು ಎಂದು ಹೇಳಿದ್ದಾರೆ. ಅಲ್ಲದೇ ಆಸ್ಟ್ರೇಲಿಯಾದ ವಿವಿಧ ಸ್ಥಳಗಳಲ್ಲಿ ಬೇರೂರಿ ನಾಗರಿಕರ ಹತ್ಯೆಗೆ ಯೋಜನೆ ರೂಪಿಸಿದ್ದರು ಎಂದಿದ್ದಾರೆ.
ಉಗ್ರರು ಆಸ್ಟ್ರೇಲಿಯಾದಲ್ಲಿ ತಲೆ ಕತ್ತರಿಸುವ ಯೋಜನೆ ರೂಪಿಸಿದ್ದರ ಬಗ್ಗೆ ನಿಖರ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ವಿವಿದೆಡೆ ದಾಳಿ ನಡೆಸಿರುವ ಆಸ್ಟ್ರೇಲಿಯಾ ಸುಮಾರು 800 ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಸ್ಟ್ರೇಲಿಯಾ ಮೇಲೆ ಭಯೋತ್ಪಾದಕ ದಾಳಿ ನಡೆಯಲಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ, ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿತ್ತು. ಇದರ ಪರಿಣಾಮವಾಗಿ, ಅಲ್ಲಲ್ಲಿ ಬೀಡುಬಿಟ್ಟಿದ್ದ ಶಂಕಿತ ಉಗ್ರರನ್ನು ಹಿಡಿಯಲು ಸಾಧ್ಯವಾಯಿತು.