ಎಡಿನ್ ಬರ್ಗ್ : 'ಬ್ರಿಟನ್' ನಿಂದ( ಯುನೈಟೆಡ್ ಕಿಂಗ್ ಡಮ್) ಪ್ರತ್ಯೇಕಗೊಳ್ಳುವ ಸಂಬಂಧ ನಡೆದಿದ್ದ ಮತದಾನದಲ್ಲಿ ಶೇ.60ರಷ್ಟು ಜನತೆ ಬ್ರಿಟನ್ ನಿಂದ ಪ್ರತ್ಯೇಕಗೊಳ್ಳದೇ ಇರಲು ನಿರ್ಧರಿಸಿದ್ದಾರೆ. ಈ ಮೂಲಕ ಸ್ಕಾಟ್ಲೆಂಡ್, ಬ್ರಿಟನ್ ಒಕ್ಕೂಟದಲ್ಲೇ ಉಳಿಯಲಿದೆ.
ಗುರುವಾರ ತಡರಾತ್ರಿ 2:30ಕ್ಕೆ ಜನಮತಗಣನೆ ಮುಕ್ತಾಯಗೊಂಡಿತ್ತು. ಭಾರತೀಯ ಕಾಲಮಾನದ ಪ್ರಕಾರ ಶುಕ್ರವಾರ ಬೆಳಿಗ್ಗೆ ಮತ ಎಣಿಕೆಯಲ್ಲಿ ಶೇ.40ರಷ್ಟು ಜನತೆ ಮಾತ್ರ ಸ್ಕಾಟ್ಲೆಂಡ್ ಪ್ರತ್ಯೇಕ ರಾಷ್ಟ್ರವಾಗಬೇಕೆಂಬ ಇಚ್ಛೆ ವ್ಯಕ್ತಪಡಿಸಿದ್ದಾರೆ. ಬಹುತೇಕ ಜನರು ಬ್ರಿಟನ್ ಒಕ್ಕೂಟದಲ್ಲೇ ಉಳಿಯಲು ಇಚ್ಛಿಸಿರುವುದರಿಂದ ಸ್ಕಾಟ್ಲೆಂಡ್ ಯುನೈಟೆಡ್ ಕಿಂಗ್ ಡಮ್ ನಲ್ಲೇ ಉಳಿಯಲಿದೆ.
ಸ್ಕಾಟ್ಲೆಂಡ್ ಜನತೆ ತೀರ್ಮಾನಕ್ಕೆ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್ ಸಂತಸ ವ್ಯಕ್ತಪಡಿಸಿದ್ದು ಒಕ್ಕೂಟದಲ್ಲೇ ಉಳಿಯಲು ತೀರ್ಮಾನಿಸಿರುವ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಒಂದು ವೇಳೆ ಹೆಚ್ಚಿನ ಸ್ಕಾಟ್ಲೆಂಡ್ ಜನರು ರಿಟನ್ ನಿಂದ ಪ್ರೆತ್ಯೇಕಗೊಳ್ಳಲು ಬಯಸಿದ್ದರೆ ಬ್ರಿಟನ್ ಗೆ ಭಾರಿ ಮುಖಭಂಗ ಉಂಟಾಗುತ್ತಿತ್ತು. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅದರ ಅಸ್ತಿತ್ವದ ಪ್ರಶ್ನೆ ಉದ್ಭವಿಸಿ ಪ್ರಧಾನಿ ಡೆವಿಡ್ ಕೆಮರೂನ್ ರಾಜೀನಾಮೆ ನೀಡುವ ಸನ್ನಿವೇಶವೂ ಉಂಟಾಗುತ್ತಿತ್ತು.