ನವದೆಹಲಿ : 'ಕಾಂಗ್ರೆಸ್' ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ, ರಾಬರ್ಟ್ ವಾದ್ರ ಜತೆ ಭೂ ಒಪ್ಪಂದ ಮಾಡಿಕೊಂಡಿರುವ ದೇಶದ ಅತಿ ದೊಡ್ಡ ರಿಯಲ್ ಎಸ್ಟೇಟ್ ಕಂಪನಿ ಡಿ.ಎಲ್.ಎಫ್ ನ ಷೇರುಗಳ ಬೆಲೆ ಅ.14ರಂದು 25%ರಷ್ಟು ಕುಸಿದಿವೆ.
ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿ ಷೇರುಪೇಟೆಯಿಂದ ಮೂರು ವರ್ಷಗಳ ಕಾಲ ನಿಷೇಧ ಹೇರಿದ 24 ಗಂಟೆಯೊಳಗೆ ಈ ಬೆಳವಣಿಗೆ ಕಂಡುಬಂದಿದೆ. 2007ರಲ್ಲಿ ಷೇರುಪೇಟೆಯಿಂದ ಬಂಡವಾಳ ಸಂಗ್ರಹಿಸುವ ವೇಳೆ ಕೆಲವೊಂದು ಮಾಹಿತಿಗಳನ್ನು ಬಚ್ಚಿಟ್ಟು ಹೂಡಿಕೆದಾರರಿಗೆ ದಾರಿತಪ್ಪಿಸಿದ ಹಾಗೂ ವಂಚಿಸಿದ ಹಿನ್ನೆಲೆಯಲ್ಲಿ ಸೆಬಿ ಡಿ.ಎಲ್.ಎಫ್ ಕಂಪನಿಗೆ ಷೇರು ಪೇಟೆಯಿಂದ ಮೂರು ವರ್ಷಗಳ ಕಾಲ ನಿಷೇಧ ಹೇರಿದೆ.
ಡಿ.ಎಲ್.ಎಫ್ ಮಾತ್ರವಲ್ಲದೇ ಆ ಕಂಪನಿಯ ಅಧ್ಯಕ್ಷ ಕೆ.ಪಿ ಸಿಂಗ್, ಅವರ ಪುತ್ರ ರಾಜೀವ್ ಸಿಂಗ್, ಪುತ್ರಿ ಪಿಯಾ ಸಿಂಗ್ ಸೇರಿದಂತೆ ಏಳು ಮಂದಿಗೆ ಷೇರುಪೇಟೆ ವ್ಯವಹಾರದಿಂದ ನಿರ್ಬಂಧ ವಿಧಿಸಲಾಗಿದೆ. ಈ ಕುರಿತು ಸೆಬಿ 43 ಪುಟಗಳ ಆದೇಶ ಹೊರಡಿಸಿತ್ತು. ಸೆಬಿ ನಿರ್ಬಂಧದ ಕುರಿತು ಪ್ರತಿಕ್ರಿಯೆ ನೀಡಿರುವ ಕಂಪನಿ ಪ್ರಕಟಣೆ ತಾನು ಯಾವುದೇ ಮಾಹಿತಿ ಮುಚ್ಚಿಟ್ಟಿಲ್ಲ ಎಂದು ಸಮರ್ಥನೆ ನೀಡಿದೆ. ಅಲ್ಲದೇ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದ್ದು ನಿರ್ಬಂಧ ತೆರವುಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದೆ.
ಒಟ್ಟಾರೆ ಸೆಬಿ ಕ್ರಮದಿಂದ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರ ಅವರ ಕಂಪನಿ ಷೇರುಪೇಟೆಯಲ್ಲಿ ಬೃಹತ್ ನಷ್ಟ ಅನುಭವಿಸುವಂತಾಗಿದೆ.