ನವದೆಹಲಿ : ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ 4 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾಗೆ ಸುಪ್ರೀಂ ಕೋರ್ಟ್ ಅ.17ರಂದು ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಜೈಲು ಶಿಕ್ಷೆ ಅಮಾನತು ಹಾಗೂ ಜಾಮೀನು ನೀಡಬೇಕೆಂದು ಕೋರಿ ಜಯಲಲಿತಾ ಕರ್ನಾಟಕ ಹೈಕೋರ್ಟ್ ಗೆ ಸಲ್ಲಿಸಿದ್ದ ಮನವಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಜಯಲಲಿತಾ ಪರ ವಕೀಲರು ಸುಪ್ರೀಂಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಅ.17ರಂದು ವಿಚಾರಣೆ ನಡೆಸಿರುವ ಸರ್ವೋಚ್ಛ ನ್ಯಾಯಾಲಯ ಜಯಲಲಿತಾಗೆ ಷರತ್ತು ಬದ್ಧ ಮಧ್ಯಂತರ ಜಾಮೀನು ನೀಡಿದೆ. ಇದೇ ವೇಳೆ ಜಯಲಲಿತಾಗೆ ವಿಧಿಸಿದ ಶಿಕ್ಷೆಯನ್ನೂ ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದೆ.
ಜಾಮೀನು ಮಂಜೂರು ಮಾಡುವ ಸಂಬಂಧ ಮೇಲ್ಮನವಿ ಸಲ್ಲಿಸಿದ ದಾಖಲೆಗಳನ್ನು ಡಿ.18ರೊಳಗೆ ಹೈಕೋರ್ಟ್ ಗೆ ಸಲ್ಲಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ದಾಖಲೆಗಳನ್ನು ಸಲ್ಲಿಸಲು ಒಂದು ದಿನ ತಡವಾದರೂ ಜಾಮೀನು ರದ್ದು ಮಾಡಲಾಗುತ್ತದೆ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಜಯಲಲಿತಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಆರೋಗ್ಯ ದೃಷ್ಠಿಯಿಂದ ಅವರಿಗೆ ಜಾಮೀನು ಮಂಜೂರು ಮಾಡಬೇಕೆಂದು ಜಯಲಲಿತಾ ಪರ ವಕೀಲ ಫಾಲಿ.ಎಸ್. ನಾರಿಮನ್ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಲಾಗಿದೆ.
ತಮ್ಮ ನೆಚ್ಚಿನ ನಾಯಕಿ ಜಯಲಲಿತಾ ಅವರ ಬೆಂಬಲಿಗರ ಸಂಭ್ರಮ ಮುಗಿಲು ಮುಟ್ಟಿದ್ದು, ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಜಯಲಲಿತಾ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ದೋಷಿ ಎಂದು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ 4 ವರ್ಷ ಜೈಲು ಹಾಗೂ 100 ಕೋಟಿ ರೂಪಾಯಿಗಳ ದಂಡ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ 21 ದಿನಗಳಿಂದ ಜಯಲಲಿತಾ ಜೈಲುವಾಸ ಅನುಭವಿಸುತ್ತಿದ್ದರು.