ಮೈಸೂರು : ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ, ಡಿ.ಕೆ.ಶಿವಕುಮಾರ್ ಅವರಿಗೆ ಸಿಬಿಐ ಕಪಾಳಮೋಕ್ಷ ಮಾಡಿ ಜೈಲಿಗೆ ಕಳುಹಿಸಲಿದೆ ಎಂದು ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿರೇಮಠ, ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸುವ ಪರಿಸ್ಥಿತಿ ಬರಲಿದೆ ಎಂದರು.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಹಗಲುಗನಸು ಕಾಣುತ್ತಿದ್ದಾರೆ. ಸಚಿವರ ಅವ್ಯವಹಾರಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ರಹಸ್ಯ ಪತ್ರ ಬರೆಯಬೇಕು, ಶಿವಕುಮಾರ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳಿಗೆ, ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಸ್ಥಾನ ನೀಡಲು ಇಷ್ಟವಿರಲಿಲ್ಲ, ಹೀಗಾಗಿ ಅವರನ್ನು ದೂರವಿರಿಸಿದ್ದರು. ಆದರೆ ಡಿ.ಕೆ.ಶಿವಕುಮಾರ್ ತಮ್ಮ ಪ್ರಭಾವ ಬಳಸಿ ಸಚಿವ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಸಿದ್ದರಾಮಯ್ಯನವರು ಅನಿವಾರ್ಯವಾಗಿ ಅವರನ್ನು ಸಂಪುಟದಲ್ಲಿ ಉಳಿಸಿಕೊಂಡಿದ್ದಾರೆ ಎಂದರು.
ಭ್ರಷ್ಟಾಚಾರದಿಂದ ಜನಾರ್ಧನರೆಡ್ಡಿಗಾದ ಸ್ಥಿತಿಯೇ ಮುಂದೆ ಡಿ.ಕೆ.ಶಿವಕುಮಾರ್ ಅವರಿಗೂ ಬರಲಿದೆ ಎಂದ ಅವರು, ಸಂವಿಧಾನದ ಮೇಲೆ ಗೌರವವಿದ್ದರೆ ಡಿ.ಕೆ.ಶಿವಕುಮಾರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ತಿಳಿಸಿದರು.