ನವದೆಹಲಿ : ಹಿರಿಯ ಕಾಂಗ್ರೆಸ್ ಮುಖಂಡ ಕರಣ್ ಸಿಂಗ್ ಅವರ ಪುತ್ರ ಅಜಾತಶತ್ರು ಸಿಂಗ್ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಜಮ್ಮು- ಕಾಶ್ಮೀರವನ್ನು ಆಳಿದ ಹರಿ ಸಿಂಗ್ ಅವರ ಮೊಮ್ಮಗರಾಗಿರುವ ಅಜಾತಶತ್ರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಜಿತೇಂದ್ರ ಸಿಂಗ್ ಅವರ ಸಮ್ಮುಖದಲ್ಲಿ ನವದೆಹಲಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಇದೇ ವೇಳೆ, ಮುಂಬರುವ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸುವ ಪಕ್ಷದ ಗುರಿಯನ್ನು ತಲುಪಲು ಶ್ರಮಿಸುವುದಾಗಿ ಹೇಳಿದ್ದಾರೆ.
ಅಜಾತಶತ್ರು ಅವರು ಪಕ್ಷಕ್ಕೆ ಸೇರ್ಪಡೆಗೊಂಡಿರುವುದರಿಂದ ಪಕ್ಷದ ನೈತಿಕ ಸ್ಥೈರ್ಯ ಹೆಚ್ಚಳಗೊಂಡಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.