ನವದೆಹಲಿ : ಏಷ್ಯನ್ ಗೇಮ್ಸ್ ಮಹಿಳಾ ಬಾಕ್ಸಿಂಗ್ ವಿಭಾಗದಲ್ಲಿ ಕಂಚಿನ ಪದಕ ಸ್ವೀಕರಿಸಲು ನಿರಾಕರಿಸಿದ್ದ ಭಾರತದ ಬಾಕ್ಸರ್ ಸರಿತಾ ದೇವಿಯವರನ್ನು ಅಂತರಾಷ್ಟ್ರೀಯ ಬಾಕ್ಸಿಂಗ್ ಸಂಸ್ಧೆ(ಎಐಬಿಎ) ಗರಿಷ್ಠ ಶಿಕ್ಷೆ ಅಥವಾ ನಿಷೇಧ ಹೇರುವ ಸಾಧ್ಯತೆ ಇದೆ.
ಸದ್ಯ ಎಐಬಿಎ ಸರಿತಾ ದೇವಿಯನ್ನು ತಾತ್ಕಾಲಿಕ ಅಮಾನತು ಮಾಡಿದ್ದು, ಅವರಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಅಂತರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ಅಧ್ಯಕ್ಷ ವು ಚಿಂಗ್-ಕುವೋ ತಿಳಿಸಿದ್ದಾರೆ.
ಕ್ರೀಡಾಪುಟಗಳು ಈ ರೀತಿಯಾಗಿ ವರ್ತಿಸುವುದು ಸರಿಯಲ್ಲ. ಗೆಲುವನ್ನು ಸ್ವೀಕರಿಸುವವರು ಸೋಲನ್ನು ಸಹ ಮನಪೂರ್ವಕವಾಗಿ ಸ್ವೀಕರಿಸಬೇಕಾಗುತ್ತದೆ. ಅದನ್ನು ಬಿಟ್ಟು ಅನುಚಿತವಾಗಿ ವರ್ತಿಸಿದರೆ ಕ್ರೀಡಾ ಸ್ಫೂರ್ತಿ ಎಲ್ಲಿ ಉಳಿಯುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.
ಏಷ್ಯನ್ ಕ್ರೀಡಾಕೂಟದ ಬಾಕ್ಸಿಂಗ್ನ ಮಹಿಳೆಯರ 60 ಕೆ.ಜಿ. ಲೈಟ್ವೇಟ್ ವಿಭಾಗದ ಸೆಮಿಫೈನಲ್ನಲ್ಲಿ ಸರಿತಾ ದೇವಿ, ದಕ್ಷಿಣ ಕೊರಿಯದ ಜಿ ನಾ ಪಾರ್ಕ್ ಕೈಯಲ್ಲಿ ಸೋಲು ಅನುಭವಿಸಿ ಕಂಚಿನ ಪದಕ ಪಡೆದಿದ್ದರು. ರೆಫರಿಗಳ ತಪ್ಪು ನಿರ್ಣಯಗಳಿಂದ ನನಗೆ ಸೋಲಾಗಿದೆ ಎಂದು ಸರಿತಾ ದೂರಿದ್ದರು. ಪದಕ ಪ್ರದಾನ ಸಮಾರಂಭದಲ್ಲಿ ಕಂಚಿನ ಪದಕವನ್ನು ತಿರಸ್ಕರಿಸಿದ್ದರು. ಈ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ಸರಿತಾ ವಿರುದ್ಧ ಕ್ರಮಕ್ಕೆ ಮುಂದಾಗಿದೆ.