ಬ್ರಿಸ್ಬೇನ್ : 'ಆಸ್ಟ್ರೇಲಿಯಾ'ದ ಬ್ರಿಸ್ಬೇನ್ ನ ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿಗೆ ಸಂಶೋಧನೆಯೇ ತಾಯಿ ಎಂಬ ಸಂದೇಶ ನೀಡಿದ್ದಾರೆ.
ಕೃಷಿ ರೋಬೋಟ್ ಮೇಲೆ ಸಂದೇಶ ಬರೆಯುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ರೋಬೋಟ್ ಮೇಲೆ ಬರೆದಿರುವ ಪ್ರಧಾನಿ ಮೋದಿ ಸಂಶೋಧನೆ ಅಭಿವೃದ್ಧಿಯ ತಾಯಿ ಎಂದಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಸಂಶೋಧನೆ ಎಂಬುದು ಅಭಿವೃದ್ಧಿಗೆ ಮೂಲ. ಮಾನವನ ಅಭಿವೃದ್ಧಿ ಹಾಗೂ ಸಂಶೋಧನೆ ನಿರಂತರವಾದ ಸಂಬಂಧ ಹೊಂದಿದೆ. ಕೃಷಿ ಕ್ಷೇತ್ರದಲ್ಲಿ ವಿಜ್ನಾನ ಹಾಗೂ ತಂತ್ರಜ್ನಾನ ಬಳಕೆಯಿಂದ ರೈತರಿಗೆ ಹೆಚ್ಚು ಉಪಯೋಗವಾಗಲಿದೆ ಎಂದು ಮೋದಿ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.
ನೂತನ ತಂತ್ರಜ್ಞಾನಗಳ ಅಳವಡಿಕೆಯಿಂದಾಗಿ ರೈತರಿಗೆ ಅನುಕೂಲವಾಗುವುದಲ್ಲದೇ, ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬಹುದು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಆಸ್ಟ್ರೇಲಿಯಾದಲ್ಲಿ ನೂತವಾಗಿ ಅಭಿವೃದ್ಧಿಗೊಂಡಿರುವ ಆಗ್ರೋ ರೋಬೋಟ್(ಕೃಷಿ ರೋಬೋಟ್) ಟ್ರಾಕ್ಟರ್ ಮಾಡುವ ಕೆಲಸವನ್ನು ಮಾಡಲಿದ್ದು, ಕಳೆಗಳನ್ನು ಕೀಳಬಲ್ಲದಾಗಿದೆ.
ಇದೇ ವೇಳೆ ವಿವಿಯಲ್ಲಿ ನಡೆಯುತ್ತಿರುವ ಸಂಶೋಧನೆಗಳನ್ನು ಮೋದಿ ವೀಕ್ಷಿಸಿದರು.