ರಾಯಪುರ : 'ಛತ್ತೀಸ್ ಗಢ'ದ ಬಿಲಾಸ್ ಪುರದಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆಗೊಳದಾ ಮಹಿಳೆಯರ ಸಾವಿಗೆ ಡಾ.ರಮಣ್ ಸಿಂಗ್ ನೇತೃತ್ವದ ಸರ್ಕಾರವೇ ನೇರ ಹೊಣೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ನ.15ರಂದು ಛತ್ತೀಸ್ ಗಢದ ಬಿಲಾಸ್ ಪುರಕ್ಕೆ ಭೇಟಿ ನೀಡಿ ಮೃತ ಮಹಿಳೆಯರ ಕುಟುಂಬದವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಅನಾಹುತಕ್ಕೆ ಹೊಣೆ ಹೊತ್ತು ಡಾ.ರಮಣ್ ಸಿಂಗ್ ರಾಜೀನಾಮೆ ಹಾಗೂ ಆರೋಗ್ಯ ಸಚಿವರು ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 13 ಮಹಿಳೆಯರು ಸಾವನ್ನಪ್ಪಿದ್ದರೆ 138 ಮಹಿಳೆಯರು ಅನಾರೋಗ್ಯಕ್ಕೀಡಾಗಿದ್ದಾರೆ. ಛತ್ತೀಸ್ ಗಢದ ವಿರೋಧ ಪಕ್ಷ ಕಾಂಗ್ರೆಸ್ ಸಹ ಆರೋಗ್ಯ ಸಚಿವರ ರಾಜೀನಾಮೆಗೆ ಒತ್ತಾಯಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಶಸ್ತ್ರ ಚಿಕಿತ್ಸೆ ನಡೆಸಿದ್ದ ವೈದ್ಯರೂ ಸೇರಿದಂತೆ ಈವರೆಗೆ ಮೂವರನ್ನು ಬಂಧಿಸಲಾಗಿದೆ. ತನಿಖೆ ನಡೆಸಲು ರಾಜ್ಯ ಸರ್ಕಾರ, ತನಿಖಾ ತಂಡವನ್ನು ನೇಮಿಸಿದೆ.
ರಾಹುಲ್ ಗಾಂಧಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು, ಅನಾಹುತದಲ್ಲಿಯೂ ರಾಹುಲ್ ಗಾಂಧಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತನಿಖಾ ತಂಡದ ಮಾಹಿತಿ ಪ್ರಕಾರ, ಕಲುಷಿತಗೊಂಡಿದ್ದ ಜಿಂಕ್ ಫಾಸ್ಫೇಟ್ ಔಷಧಿಗಳನ್ನು ನೀಡಿರುವುದೇ ಸಂತಾನ ಹರಣ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಮಹಿಳೆಯರ ಸಾವಿಗೆ ಕಾರಣ ಎಂದು ತಿಳಿದುಬಂದಿದೆ.