ಇಸ್ಲಾಮಾಬಾದ್ : ಎರಡು ದಿನಗಳ ಹಿಂದಷ್ಟೇ ಭಾರತದ ಹಲವು ನಗರಗಳನ್ನು ಗುರಿ ಇರಿಸಿ ಧ್ವಂಸಗೊಳಿಸಬಲ್ಲ ಅಣ್ವಸ್ತ್ರ ವಾಹಕ ಕ್ಷಿಪಣಿಗಳ ಪರೀಕ್ಷಾ ಉಡ್ಡಯನವನ್ನು ಯಶಸ್ವಿಯಾಗಿ ಕೈಗೊಂಡಿದ್ದ ಪಾಕಿಸ್ಥಾನ, ಈಗ ಮತ್ತೆ 900 ಕಿ.ಮೀ. ದೂರ ವ್ಯಾಪ್ತಿಯ ಅಣ್ವಸ್ತ್ರ ವಾಹಕ ಖಂಡಾಂತರ ಕ್ಷಿಪಣಿಯ ಪರೀಕ್ಷಾ ಉಡ್ಡಯನವನ್ನು ಯಶಸ್ವಿಯಾಗಿ ನಡೆಸಿದೆ.
ಶಹೀನ್ 1ಎ ಅಥವಾ ಹಫ್ತ್-4 ಖಂಡಾಂತರ ಅಣ್ವಸ್ತ್ರ ವಾಹಕ ಕ್ಷಿಪಣಿಯು ಹಲವಾರು ವಿನೂತನ ತಾಂತ್ರಿಕ ಸುಧಾರಣೆಗಳು ಹಾಗೂ ವಿವಿಧ ವಿನ್ಯಾಸಗಳ ಪುನರ್ ದೃಢೀಕರಣದ ಉದ್ದೇಶದೊಂದಿಗೆ ರೂಪಿಸಲ್ಪಟ್ಟಿದೆ. ಹಫ್ತ್-4 ಅಣ್ವಸ್ತ್ರ ವಾಹಕ ಕ್ಷಿಪಣಿಯ ಪರೀಕ್ಷಾ ಉಡ್ಡಯನವನ್ನು ದಕ್ಷಿಣ ಅರಬ್ಬೀ ಸಮುದ್ರದಲ್ಲಿನ ನಿರ್ದಿಷ್ಟ ಗುರಿಯನ್ನು ಇರಿಸಿಕೊಂಡು ಯಶಸ್ವಿಯಾಗಿ ಪರೀಕ್ಷಾರ್ಥವಾಗಿ ಉಡಾಯಿಸಲಾಯಿತು ಎಂದು ಪಾಕ್ ಸೇನೆ ಹೇಳಿಕೊಂಡಿದೆ.
ಈ ಪರೀಕ್ಷಾ ಉಡ್ಡಯನದ ವೇಳೆ ಪಾಕ್ ನೌಕಾ ಪಡೆಯ ಮುಖ್ಯಸ್ಥ ಎಡ್ಮಿರಲ್ ಮುಹಮ್ಮದ್ ಝಕಾಉಲ್ಲಾ, ವ್ಯೂಹಾತ್ಮಕ ಯೋಜನಾ ವಿಭಾಗದ ಮಹಾ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಝಬೇರ್ ಮಹಮೂದ್ ಹಯಾದ್, ವ್ಯೂಹಾತ್ಮಕ ಸೇನಾ ಪಡೆ ಕಮಾಂಡರ್ ಹಾಗೂ ಸೇನೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.