ಲಖ್ನೌ : ಉತ್ತರ ಪ್ರದೇಶದ ಅಲ್ಪಸಂಖ್ಯಾತ ಸಚಿವ ಆಜಂ ಖಾನ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ 75ನೇ ಜನ್ಮದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸುತ್ತಿರುವ ಬಗ್ಗೆ ಮಾಧ್ಯಮಗಳಿಗೆ ಆಜಂ ಖಾನ್ ನೀಡಿರುವ ಪ್ರತಿಕ್ರಿಯೆ ವಿವಾದಕ್ಕೆ ಕಾರಣವಾಗಿದೆ.
ನ.21ರಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಜನ್ಮ ದಿನ. ರಾಜ್ಯಾದ್ಯಂತ ಮುಲಾಯಂ ಸಿಂಗ್ ಯಾದವ್ ಅವರ ಹುಟ್ಟು ಹಬ್ಬವನ್ನು ಸಂಭ್ರದಿಂದ ಆಚರಿಸಲಾಗುತ್ತಿದೆ. ಮುಲಾಯಂ ಸಿಂಗ್ ಯಾದವ್ ಅವರ 75ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ರಾಜಧಾನಿ ಲಕ್ನೌದಲ್ಲಿ 75 ಕೆ.ಜಿ ಲಡ್ಡು ಹಾಗೂ 75 ಅಡಿ ಉದ್ದದ ಕೇಕ್ ನ್ನು ಸಿದ್ಧಪಡಿಸಲಾಗಿದೆ. ಇಷ್ಟೆಲ್ಲಾ ತಯಾರಿಗೆ ಹಣದ ಮೂಲ ಪ್ರಶ್ನಿಸಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಆಜಂ ಖಾನ್, ಮುಲಾಯಂ ಸಿಂಗ್ ಯಾದವ್ ಅವರ ಹುಟ್ಟುಹಬ್ಬ ಆಚರಣೆಗೆ ತಾಲೀಬಾನ್, ದಾವೂದ್ ಇಬ್ರಾಹಿಂ ಹಾಗೂ ಇನ್ನಿತರ ಉಗ್ರ ಸಂಘಟನೆಗಳು ಹಣ ನೀಡಿವೆ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ.
ಉತ್ತರ ಪ್ರದೇಶದ ಜನತೆ ವಿದ್ಯುತ್ ಸಂಪರ್ಕವಿಲ್ಲದೇ ತೀವ್ರ ಸಂಕಷ್ಟ ಎದುರಿಸುತ್ತಿದ್ದರೆ, ಸಮಾಜವಾದಿ ಮೌಲ್ಯಗಳನ್ನು ಪ್ರತಿಪಾದಿಸುವ ಮುಲಾಯಂ ಸಿಂಗ್ ಯಾದವ್ ಅವರ ಜನ್ಮದಿನವನ್ನು ರಸ್ತೆಗಳನ್ನು ಸಿಂಗರಿಸುವ ಮೂಲಕ ಅದ್ಧೂರಿಯಾಗಿ ಆಚರಿಸುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.