ಅಸ್ಸಾಂ : 'ಅಸ್ಸಾಂ' ನ ಡಿಬ್ರೂಗರ್ ಜಿಲ್ಲೆಯ ರಾಜ್ ಗರ್ ನಲ್ಲಿ ನ.23ರ ರಾತ್ರಿ ಸಂಭವಿಸಿದ್ದ ಸ್ಫೋಟದಲ್ಲಿ ಓರ್ವ ಮೃತಪಟ್ಟಿದ್ದು, 27 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ರಾಜ್ ಗರ್ ನ ಮಾರುಕಟ್ಟೆಯಲ್ಲಿ ಭಾನುವಾರ ರಾತ್ರಿ ಸ್ಫೋಟ ಸಂಭವಿಸಿತ್ತು. ಕಚ್ಚಾ ಬಾಂಬ್ ಅಥವಾ ಐಇಡಿಯಿಂದ ಸ್ಫೋಟ ಸಂಭವಿಸಿದರ ಬಗ್ಗೆ ಅನುಮಾನ ವ್ಯಕ್ತವಾಗಿದ್ದು ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಡಿಬ್ರೂಗರ್ನ ಪೊಲೀಸ್ ವರಿಷ್ಠಾಧಿಕಾರಿ ರಾಣಾ ಬೂಯಾನ್ ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ಟ್ರಕ್ ವೊಂದಕ್ಕೆ ಸರಕು ತುಂಬುತ್ತಿದ್ದ ವೇಳೆ ಟ್ರಕ್ ಕೆಳಗೆ ಸ್ಫೋಟ ಸಂಭವಿಸಿದೆ. ಟ್ರಕ್ ಇಂಜಿನ್ ಸಿಡಿದಿರುವ ಸಾಧ್ಯತೆ ಇದ್ದು, ತನಿಖೆ ನಂತರ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಈ ವರೆಗೂ ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಸ್ಫೋಟದಲ್ಲಿ ಮೃತಪಟ್ಟಿವನನ್ನು 55 ವರ್ಷದ ಮಣಿಲಾಲ್ ಗುಪ್ತಾ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಅಸ್ಸಾಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.