ನವದೆಹಲಿ : ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣವನ್ನು ವಾಪಸ್ ತರಲು ಪ್ರಯತ್ನಿಸುತ್ತಿರುವ ಭಾರತ ಈಗ ಎಚ್ಎಸ್ಬಿಸಿ ಜಿನೆವಾ ಶಾಖೆಯ ಮಾಜಿ ಉದ್ಯೋಗಿ ಹರ್ವ್ ಫ್ಯಾಲಸಿನಿ ಅವರಿಂದ ಸಹಾಯ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ.
ಭಾರತಕ್ಕೆ ಕಾಳಧನ ಕುರಿತು ಶೇ.1ರಷ್ಟೂ ಮಾಹಿತಿಯೂ ಇಲ್ಲ. ಆ ಮಾಹಿತಿ ನನ್ನ ಬಳಿ ಇದೆ, ಭಾರತಕ್ಕೆ ನೆರವಾಗಲು ಸಿದ್ಧನಿದ್ದೇನೆ ಎಂದು ಕೆಲವೇ ದಿನಗಳ ಹಿಂದೆ ಹರ್ವ್ ಫ್ಯಾಲಸಿನಿ ಹೇಳಿದ್ದರು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಫ್ಯಾಲಸಿನಿ ನೆರವು ಪಡೆಯಲು ನಿರ್ಧರಿಸಿದೆ.
ಈ ಸಂಬಂಧ ಭಾರತೀಯ ಅಧಿಕಾರಿಗಳು ಹಾಗೂ ಫ್ಯಾಲಸಿನಿ ನಡುವೆ ಮಾತುಕತೆ ನಡೆದಿದೆ. ಅಗತ್ಯ ಬಿದ್ದರೆ ಒಂದು ತಂಡದೊಂದಿಗೆ ಭಾರತಕ್ಕೆ ಬರಲು ಸಿದ್ಧವಿರುವುದಾಗಿ ಫ್ಯಾಲಸಿನಿ ತಿಳಿಸಿದ್ದಾರೆ
ಎಚ್ಎಸ್ಬಿಸಿ ಜಿನೆವಾ ಶಾಖೆಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿದ್ದ ಫ್ಯಾಲಸಿನಿ, ಅಲ್ಲಿ ಖಾತೆ ಹೊಂದಿದ್ದ ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳ ವ್ಯಕ್ತಿಗಳ ಪಟ್ಟಿಯನ್ನು 2006ರಲ್ಲಿ ಸೋರಿಕೆ ಮಾಡಿದ್ದರು. ಇತ್ತೀಚೆಗಷ್ಟೇ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ, ಭಾರತಕ್ಕೆ ಗೊತ್ತಿರುವ ಕಪ್ಪುಹಣ ಮಾಹಿತಿ ಅತ್ಯಲ್ಪ ಎಂದಿದ್ದರು.