ನವದೆಹಲಿ : ಭಾರತ ಶೀಘ್ರವೇ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾ, ಕಾಂಗ್ರೆಸ್ ದೇಶಾದ್ಯಂತ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ. ಅತಿ ಶೀಘ್ರವೇ ಸಮಸ್ತ ಭಾರತ ಕಾಂಗ್ರೆಸ್ ಮುಕ್ತ ಭಾರತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಡೆದ ಚುನಾವಣೆಗಳಲ್ಲಿ ಭಾರತ ಕಾಂಗ್ರೆಸ್ ಮುಕ್ತವಾಗುವ ಲಕ್ಷಣಗಳು ಗೋಚರಿಸುತ್ತಿದೆ. ಕಾಂಗ್ರೆಸ್ ನ್ನು ಜನತೆ ಧಿಕ್ಕರಿಸುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತಿದ್ದು ಕಾಂಗ್ರೆಸ್ ಮುಕ್ತ ಭಾರತ ಎಂಬ ನಮ್ಮ ಅಭಿಯಾನ ಯಶಸ್ವಿಯಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲೇ ಜನತೆ ಬಿಜೆಪಿಯನ್ನು ನೇರವಾಗಿ ಆಯ್ಕೆ ಮಾಡಿ, ಕಾಂಗ್ರೆಸ್ ಗೆ 'ಕೈ' ಕೊಟ್ಟಿದ್ದಾರೆ. ಯಾವುದೇ ರಾಜ್ಯಗಳಲ್ಲಿ ನಡೆದಿರುವ ವಿಧಾನಸಭಾ ಚುನಾವಣೆಯಲ್ಲಿ ಜನತೆ ಹೆಚ್ಚಾಗಿ ಬಿಜೆಪಿಗೆ ಮತ ಚಲಾಯಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳಿಗೆ ಧನ್ಯವಾದ ತಿಳಿಸಿದ ಅಮಿತ್ ಶಾ, ದೇಶದ ಅಭಿವೃದ್ಧಿಗಾಗಿ ಬಿಜೆಪಿ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ.