ನವದೆಹಲಿ : ಕಪ್ಪುಹಣ ಕುರಿತು ಇದೇ ಮೊದಲ ಬಾರಿಗೆ ದೊಡ್ಡ ಮಾಹಿತಿಯನ್ನು ಬಹಿರಂಗಪಡಿಸಿರುವ ವಿಶೇಷ ತನಿಖಾ ದಳ (ಎಸ್ಐಟಿ)ವು, ಇದುವರೆಗೆ 20,000 ಕೋಟಿ ರೂ. ನಷ್ಟು ಕಪ್ಪುಹಣವನ್ನು ಪತ್ತೆ ಮಾಡಿರುವುದಾಗಿ ಹೇಳಿದೆ.
ವಿಶೇಷವೆಂದರೆ ಹೀಗೆ ಪತ್ತೆಯಾದ ಕಪ್ಪುಹಣದ ಪೈಕಿ ಸ್ವಿಸ್ ಬ್ಯಾಂಕ್ನಲ್ಲಿ ಇರುವುದು 4479 ಕೋಟಿ ರೂ. ಮಾತ್ರ, ಉಳಿದ 14958 ಕೋಟಿ ರೂ. ಹಣವನ್ನು ಭಾರತದಲ್ಲೇ ಪತ್ತೆ ಹಚ್ಚಲಾಗಿದೆ.
ಕಪ್ಪುಹಣ ಕುರಿತು ತನಿಖೆಯ ಸ್ಥಿತಿಗತಿಯ ವರದಿಯನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಿದ ನ್ಯಾ.ಎಂ.ಬಿ.ಶಾ ನೇತೃತ್ವದ ಸಮಿತಿ, ಎಚ್ಎಸ್ಬಿಸಿಯ ಜಿನೆವಾ ಬ್ರ್ಯಾಂಚ್ ನೀಡಿದ್ದ 628 ಭಾರತೀಯರ ಕುರಿತು ತನಿಖೆ ನಡೆಸಲಾಗಿದೆ .ಇದರಲ್ಲಿ 289 ಜನರ ಖಾತೆಯಲ್ಲಿ ಯಾವುದೇ ಹಣವಿಲ್ಲ. 201 ಜನ ಅನಿವಾಸಿ ಭಾರತೀಯರು ಇಲ್ಲವೇ ನಾಪತ್ತೆಯಾಗಿದ್ದಾರೆ. ಉಳಿದ 427 ಜನರ ವಿರುದ್ಧ ಕೇಸು ದಾಖಲಿಸಬಹುದಾಗಿದೆ. ಈ ಪೈಕಿ 79 ವ್ಯಕ್ತಿ ಇಲ್ಲವೇ ಸಂಸ್ಥೆಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಿದೆ. ಇದೇ ವೇಳೆ ಈ ಆರೋಪಿಗಳಿಂದ ಈಗಾಗಲೇ 2926 ಕೋಟಿ ರೂ.ಗಳನ್ನು ತೆರಿಗೆ ಮತ್ತು ದಂಡದ ರೂಪದಲ್ಲಿ ಸಂಗ್ರಹಿಸಲಾಗಿದೆ ಎಂದೂ ತಿಳಿಸಿದೆ.
ಇನ್ನು ಭಾರತದಲ್ಲಿ ಗಣಿಗಾರಿಕೆ, ವಂಚನೆ ಸ್ಕೀಮುಗಳು, ಕಬ್ಬಿಣದ ಅದಿರು ರಫ್ತು, ಕಪ್ಪುಹಣ ಚಲಾವಣೆಗೆ ಪ್ರಮುಖ ವಲಯಗಳಾಗಿವೆ. ಹೀಗಾಗಿ ಇವುಗಳ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು. ಈ ಮೇಲ್ಕಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 14958 ಕೋಟಿ ರೂ. ಕಪ್ಪುಹಣ ಪತ್ತೆಯಾಗಿದೆ. ಈ ಪೈಕಿ ಹಲವು ಪ್ರಕರಣಗಳಲ್ಲಿ ಆಸ್ತಿ ಜಪ್ತಿಗೆ ಆದೇಶ ಹೊರಡಿಸಲಾಗಿದೆ. ಇನ್ನು ಕೆಲವು ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಹೇಳಿದೆ.
ಇದೇ ವೇಳೆ ಕಪ್ಪುಹಣ ಪತ್ತೆ ಮತ್ತು ತಡೆಗೆ 13 ಅಂಶಗಳ ಮಾರ್ಗಸೂಚಿಯೊಂದನ್ನು ಶಾ ಸಮಿತಿ ಶಿಫಾರಸ್ಸು ಮಾಡಿದೆ. ಅದರಲ್ಲಿ 1 ಲಕ್ಷ, ಅದಕ್ಕಿಂತ ಅಧಿಕ ಮೊತ್ತದ ನಗದು ಮತ್ತು ಚೆಕ್ ವಹಿವಾಟಿ ಪಾನ್ ಕಡ್ಡಾಯ, 15 ಲಕ್ಷ ರೂ.ಗಿಂತ ಹೆಚ್ಚಿನ ನಗದು ಇಟ್ಟುಕೊಳ್ಳುವುದು, ಸಾಗಾಟಕ್ಕೆ ನಿಷೇಧ, ದೊಡ್ಡ ಮೊತ್ತದ ನಗದನ್ನು ಚೆಕ್ ಆಗಿ ಪರಿವರ್ತಿಸುವುದಕ್ಕೆ ನಿಷೇಧ ಸೇರಿದೆ.