ಲಖ್ನೌ : ಪಶ್ಚಿಮ ಉತ್ತರ ಪ್ರದೇಶದಲ್ಲಿ ಧರ್ಮ ಜಾಗರಣ ಸಮಿತಿ ಡಿ.25ರಂದು ನಡೆಸಲು ಉದ್ದೇಶಿಸಲಾಗಿದ್ದ ಸಾಮೂಹಿಕ ಮರು ಮತಾಂತರ ಕಾರ್ಯಕ್ರಮವನ್ನು ನಡೆಸದೇ ಇರಲು ತೀರ್ಮಾನಿಸಿದೆ.
ಈ ಬಗ್ಗೆ ಪಿಟಿಐ ಗೆ ಸ್ಪಷ್ಟನೆ ನೀಡಿರುವ ಧರ್ಮ ಜಾಗರಣ ಸಮಿತಿ ಮುಖ್ಯಸ್ಥ, ಡಿ.25ರಂದು ನಡೆಸಬೇಕಿದ್ದ ಘರ್ ವಾಪಸಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಘರ್ ವಾಪಸಿ ಕಾರ್ಯಕ್ರಮವನ್ನು ಏಕಾಏಕಿ ರದ್ದುಗೊಳಿಸುವ ಬಗ್ಗೆ ಸಂಘಟನೆ ವಿವರಣೆ ನೀಡಿಲ್ಲ.
ಉತ್ತರ ಪ್ರದೇಶದ ಅಲೀಘರ್ ನಲ್ಲಿ ಕ್ರಿಸ್ ಮಸ್ ದಿನದಂದು ಘರ್ ವಾಪಸಿ ಮೂಲಕ 5000 ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಸಮುದಾಯದವರನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತರಲಾಗುವುದು ಎಂದು ಧರ್ಮ ಜಾಗರಣ ಸಮಿತಿ ಹೇಳಿತ್ತು. ಅಲ್ಲದೇ, ಇದಕ್ಕೂ ಮೊದಲು 57 ಅನ್ಯಧರ್ಮೀಯ ಕುಟುಂಬದವರು ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದರು. ಈ ವಿವಾದದ ಬಗ್ಗೆ ಸಂಸತ್ ನಲ್ಲಿ ಕಾಂಗ್ರೆಸ್ ನ ಸದಸ್ಯರು ಪ್ರತಿಭಟನೆ ನಡೆಸಿದ್ದರು.
ಡಿ.17ರಂದೂ ಪ್ರತಿಭಟನೆ ಮುಂದುವರೆಸಿರುವ ಕಾಂಗ್ರೆಸ್ ಸಂಸದರು ಮರುಮತಾಂತರದ ಬಗ್ಗೆ ಪ್ರಧಾನಿ ಸ್ಪಷ್ಟನೆ ನೀಡುವವರೆಗೂ ಸುಗಮ ಸಂಸತ್ ಕಲಾಪ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.