ಇಸ್ಲಾಮಾಬಾದ್ : ಭಾರತ ಸರ್ಕಾರದ ತೀಕ್ಷ್ಣ ಆಕ್ಷೇಪ ಎದುರಿಸಿದ ಪಾಕಿಸ್ತಾನ, ಜಾಮೀನು ಪಡೆದಿದ್ದ 26/11 ರ ಮುಂಬೈ ದಾಳಿ ಮಾಸ್ಟರ್ ಮೈಂಡ್ ಜಾಕೀರ್ ರೆಹಮಾನ್ ಲಖ್ವಿಯನ್ನು ಡಿ.19ರಂದು ಬಂಧಿಸಿದೆ.
ಪಾಕಿಸ್ತಾನದ ಡಾನ್ ಅಂತರ್ಜಾಲ ಪತ್ರಿಕೆಯ ವರದಿ ಪ್ರಕಾರ ಪಾಕ್ ಸರ್ಕಾರ ಜಾಕೀರ್ ರೆಹಮಾನ್ ನನ್ನು ರಾವಲ್ಪಿಂಡಿಯ ಜೈಲಿನಲ್ಲಿ ಬಂಧಿಸಿದೆ ಎಂದು ತಿಳಿದುಬಂದಿದೆ. ಮುಂಬೈ ದಾಳಿ ರುವಾರಿ ಲಖ್ವಿಗೆ ಜಾಮೀನು ಮಂಜೂರು ಮಾಡಿರುವುದಕ್ಕೆ ಭಾರತ ಸರ್ಕಾರದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಲಖ್ವಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನವಾಜ್ ಷರೀಫ್ ನೇತೃತ್ವದ ಪಾಕಿಸ್ತಾನ ಸರ್ಕಾರ ತೀರ್ಮಾನಿಸಿದೆ.
ಜಾಮೀನು ಮಂಜೂರು ಮಾಡಿರುವುದರ ವಿರುದ್ಧ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಲಖ್ವಿಯನ್ನು ರಾವಲ್ಪಿಂಡಿಯ ಜೈಲಿನಲ್ಲಿಡಲಾಗಿದೆ. ಉಗ್ರ ಲಖ್ವಿಗೆ ಜಾಮೀನು ನೀಡಿರುವುದರ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದರೆ ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುವ ಬಗ್ಗೆ ನೀಡಿರುವ ಹೇಳಿಕೆ ಜಾಗತಿಕ ಮಟ್ಟದಲ್ಲಿ ಅಪಹಾಸ್ಯಕ್ಕೆ ಗುರಿಯಾಗಲಿದೆ ಎಂದು ಭಾರತ ಸರ್ಕಾರ ಪಾಕ್ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಈ ಬೆನ್ನಲ್ಲೇ ಜಾಕೀರ್ ರೆಹಮಾನ್ ನನ್ನು ಬಂಧಿಸಲಾಗಿದೆ.
ಲಖ್ವಿ ಜಾಮೀನು ಬಗ್ಗೆ ಭಾರತ ಸರ್ಕಾರದ ನಿಲುವು ಸ್ಪಷ್ಟಪಡಿಸಬೇಕೆಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಕ್ಕೆ ಪ್ರತಿಕ್ರಿಯಿಸಿದ್ದ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು, ಪಾಕಿಸ್ತಾನಕ್ಕೆ ಭಾರತದಿಂದ ಸಂಘಟಿತ ಸಂದೇಶ ರವಾನೆ ಮಾಡಬೇಕೆಂದು ಕರೆ ನೀಡಿದ್ದರು.