ನವದೆಹಲಿ : ಉತ್ತಮ ಆಡಳಿತ(ಪ್ರದರ್ಶನ) ನೀಡುತ್ತಿರುವ ವಿಶ್ವದ 30 ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಸ್ಥಾನ ಪಡೆದಿದ್ದಾರೆ.
ಜಪಾನಿನ ಮಾರುಕಟ್ಟೆ ಸಂಶೋಧನಾ ಸಂಸ್ಥೆ ನಡೆಸಿರುವ ಸರ್ವೆಯ ಪ್ರಕಾರ ಚೀನಾದ ಅಧ್ಯಕ್ಷ ಕ್ಸೀ ಜಿನ್‌ಪಿಂಗ್ ಅಗ್ರಸ್ಥಾನದಲ್ಲಿದ್ದಾರೆ. ಉತ್ತಮ ಆಡಳಿತ(ಪ್ರದರ್ಶನ) ನೀಡುವವರ ಪಟ್ಟಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ನಂತರದ ಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ. ಜರ್ಮನಿಯ ಕುಲಪತಿ ಏಂಜೆಲಾ ಮರ್ಕೆಲ್ ಮೂರನೇ ಸ್ಥಾನದ್ದಾರೆ.
ಟೋಕಿಯೋ ಮೂಲದ ಜಿಎಂಒ ಸಂಶೋಧನೆಯಲ್ಲಿ 26 ಸಾವಿರ ಮಂದಿಯನ್ನು ಸರ್ವೇಗೊಳಪಡಿಸಲಾಗಿತ್ತು. ಅದರಂತೆ ಹತ್ತು ಅಂಕಗಳಲ್ಲಿ ಚೀನಾ ಅಧ್ಯಕ್ಷ ಕ್ಸೀ ಜಿನ್‌ಪಿಂಗ್ 7.5, ಮೋದಿ 7.3, ಮರ್ಕೆಲ್ 7.2 ಅಂಕ ಗಳಿಸಿ ಟಾಪ್ ಮೂರು ಸ್ಥಾನ ಪಡೆದಿದ್ದಾರೆ.
ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುತ್ತಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ 6.6 ಅಂಕಿ ಗಳಿಸಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. 6.5 ಅಂಕಗಳಿಸುವ ಮೂಲಕ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಐದನೇ ಸ್ಥಾನದಲ್ಲಿದ್ದಾರೆ.
ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್, ಜಪಾನಿನ ಪ್ರಧಾನಿ ಶಿಂಜೋ ಅಬೆ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ರಮವಾಗಿ ಆರು, ಏಳು, ಎಂಟನೇ ಸ್ಥಾನದಲ್ಲಿದ್ದಾರೆ.
ಜಪಾನ್ ಸರ್ವೆ ನಡೆಸಿರುವ ಈ ಸರ್ವೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಜಾಗತಿಕ ಮಟ್ಟದಲ್ಲಿ ಎಲ್ಲರನ್ನೂ ಆಕರ್ಷಿಸುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.