ಮಧ್ಯಪ್ರದೇಶ : ಒಂದು ಕಾಲದಲ್ಲಿ ಇಡೀ ಪ್ರಪಂಚದಲ್ಲಿ ವಾಸಿಸುತ್ತಿದ್ದವರೆಲ್ಲರೂ ಹಿಂದೂಗಳೆಂದು ವಿಶ್ವ ಹಿಂದೂ ಪರಿಷತ್ ನ ಮುಖಂಡ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.
ಡಿ.22ರಂದು ಮಧ್ಯಪ್ರದೇಶದಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ಮಾತನಾಡಿದ ಪ್ರವೀಣ್ ತೊಗಾಡಿಯಾ, ಜಗತ್ತಿನಲ್ಲಿ ಎಲ್ಲೆಲ್ಲಿ ಮಾನವರು ವಾಸವಾಗಿದ್ದರೋ ಅವರೆಲ್ಲರೂ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದರು, ಇಂದು ಜಗತ್ತಿನಲ್ಲಿರುವ 7,000 ಮನುಷ್ಯರಲ್ಲಿ ಹಿಂದೂಗಳ ಸಂಖ್ಯೆ ಕೇವಲ 100 ಕೋಟಿಗಳಷ್ಟಾಗಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ, ಕೆಲವೇ ವರ್ಷಗಳಲ್ಲಿ ಹಿಂದೂಗಳ ಸಂಖ್ಯೆ 10 ಕೋಟಿಗೆ ಇಳಿಯುತ್ತದೆ ಎಂದು ಹೇಳಿದ್ದಾರೆ.
ಬಲವಂತದ ಮತಾಂತರವನ್ನು ತಡೆಗಟ್ಟಲು ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕಿದೆ. ಈ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದರೂ ಅದನ್ನು ವಿಶ್ವ ಹಿಂದೂ ಪರಿಷತ್ ಸ್ವಾಗತಿಸಲಿದೆ ಎಂದು ಪ್ರವೀಣ್ ತೊಗಾಡಿಯಾ ತಿಳಿಸಿದ್ದಾರೆ.
ಇದೇ ವೇಳೆ ರಾಮಮಂದಿರ ನಿರ್ಮಾಣದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರವೀಣ್ ತೊಗಾಡಿಯಾ, ಯಾರು ಒಪ್ಪಿದರೂ, ಒಪ್ಪದೇ ಇದ್ದರೂ ಉತ್ತರ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಶಪಥ ಮಾಡಿದ್ದಾರೆ. ಭಾರತದಲ್ಲಿ ಶೇ.82ರಷ್ಟು ಹಿಂದೂಗಳಿದ್ದು, ಈ ಅಂಕಿ ಅಂಶವನ್ನು ಶೇ.100ರಷ್ಟು ಮಾಡಲಿದ್ದೇವೆ ಎಂದು ಡಿ.21ರಂದು ಹೇಳಿದ್ದರು. ಈ ಬೆನ್ನಲ್ಲೇ ಹೇಳಿಕೆ ನೀಡಿರುವ ತೊಗಾಡಿಯಾ, ಒಂದು ಕಾಲದಲ್ಲಿ ಇಡಿ ಪ್ರಪಂಚದಹಿಂದೂ ಧರ್ಮವನ್ನು ಆಚರಣೆ ಮಾಡುತ್ತಿತ್ತು ಎಂದು ಹೇಳಿದ್ದಾರೆ