ನವದೆಹಲಿ : 'ಭಾರತ' ವಿರೋಧಿ ಅಂಶಗಳನ್ನು ಪ್ರಕಟಿಸುತ್ತಿದ್ದ 32 ವೆಬ್ ಸೈಟ್ ಗಳಿಗೆ ಭಾರತ ಸರ್ಕಾರ ನಿರ್ಬಂಧ ವಿಧಿಸಿದೆ. ರಾಷ್ಟ್ರೀಯ ಭದ್ರತಾ ಕಾರಣಗಳಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಕೆಲ ವೆಬ್ ಸೈಟ್ ಗಳು ಭಾರತ ವಿರೋಧಿ ಅಂಶಗಳನ್ನು ಪ್ರಕಟಿಸುತ್ತಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ನಿಷೇಧಕ್ಕೊಳಗಾಗಿರುವ ವೆಬ್ ಸೈಟ್ ಗಳು, ಐ.ಎಸ್.ಐ.ಎಸ್ ಸಂಘಟನೆಗೆ ಸೇರಿದ್ದ ಮುಂಬೈ ಮೂಲದ ಯುವಕ ಅರೀಬ್ ಮಜೀದ್ ಹಾಗೂ ಭಟ್ಕಳ ಪ್ರಾಂತ್ಯದ ಯುವಕರ ಬಗ್ಗೆ ಅತಿ ಹೆಚ್ಚು ವರದಿ ಪ್ರಕಟ ಮಾಡುವ ಮೂಲಕ ಭಾರತದ ಯುವ ಜನತೆಯನ್ನು ಜಿಹಾದಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಿದ್ದವು.
ದೇಶ ವಿರೋಧಿ ನಿಲುವು ಹೊಂದಿರುವ ವೆಬ್ ಸೈಟ್ ಗಳನ್ನು ಉಗ್ರ ನಿಗ್ರಹ ದಳದ ಆದೇಶದ ಮೇರೆಗೆ ನಿಷೇಧಕ್ಕೊಳಪಡಿಸಲಾಗಿದೆ ಎಂದು ಬಿಜೆಪಿ ಐಟಿ ಸೆಲ್ ನ ರಾಷ್ಟ್ರೀಯ ಮುಖಂಡ ಅರವಿಂದ್ ಗುಪ್ತಾ ತಿಳಿಸಿದ್ದಾರೆ.