BW News Bureau : ಬೆಂಗಳೂರಿನ ಶಾಲೆಯಲ್ಲಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ಶಾಲಾ ದೈಹಿಕ ಶಿಕ್ಷಕನೇ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಘಟನೆ ವರದಿಯಾಗುತ್ತಿದ್ದಂತೆಯೇ ಶಾಲಾ ದೈಹಿಕ ಶಿಕ್ಷಕನ ಮೇಲೆ ಪೋಷಕರು ಹಲ್ಲೆ ನಡೆಸಲು ಯತ್ನಿಸಿದ್ದಾರೆ.
ಸುಮಾರು 500ಕ್ಕೂ ಹೆಚ್ಚು ಪೋಷಕರು ಶಾಲೆಯ ಮುಂದೆ ಜಮಾಯಿಸಿ, ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪೋಷಕರನ್ನು ತಡೆಯಲು ಪ್ರಯತ್ನಿಸಿದರು. ಸುಮಾರು 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಪ್ರತಿಭಟನಾಕಾರರನ್ನು ತಡೆಯಲು ಪ್ರಯತ್ನಿಸಲಾಯಿತು.
ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ದೈಹಿಕ ಶಿಕ್ಷಕನನ್ನು ವಶಕ್ಕೆ ತೆಗೆದುಕೊಂಡರು. ಉದ್ರಿಕ್ತಗೊಂಡ ಪೋಷಕರು ಶಾಲಾ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ. ತರಗತಿಗಳಲ್ಲಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರಲ್ಲದೆ, ಬೆಂಕಿ ಹಚ್ಚಲು ಯತ್ನಿಸಿದ್ದಾರೆ.
ಪೋಷಕರನ್ನು ಸಮಾಧಾನಗೊಳಿಸಲು ಪೊಲೀಸರು ಪ್ರಯತ್ನಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ, ಈ ವೇಳೆ ಲಘು ಲಾಠಿ ಪ್ರಯೋಗಸಹ ನಡೆಯಿತು. ಹೆಚ್ಚಿನ ಭದ್ರತೆಗಾಗಿ 5 ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್, ಸಾರ್ವಜನಿಕರನ್ನು ಶಾಂತ ರೀತಿಯಲ್ಲಿ ವರ್ತಿಸಲು ಹೇಳಿದ್ದಾರೆ.