ಬೆಂಗಳೂರು : ರಾಜ್ಯ ಸರ್ಕಾರ ಕೆ.ಪಿ.ಎಸ್.ಸಿ ಅಧ್ಯಕ್ಷ ಹುದ್ದೆಗೆ ಶಿಫಾರಸ್ಸು ಮಾಡಿರುವ ವಿ.ಆರ್ ಸುದರ್ಶನ್ ವಿರುದ್ಧದ ಭೂ ಕಬಳಿಕೆ ಆರೋಪದ ಬಗ್ಗೆ ರಾಜ್ಯಪಾಲರು ರಾಜ್ಯ ಸರ್ಕಾರದಿಂದ ವರದಿ ಕೇಳಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಜಿ ಕಾಂಗ್ರೆಸ್ ಶಾಸಕ ವಿ.ಆರ್ ಸುದರ್ಶನ್ ಅವರನ್ನು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಅಧ್ಯಕ್ಷ ಹುದ್ದೆಗೆ ಶಿಫಾರಸ್ಸು ಮಾಡಿತ್ತು. ಆದರೆ ಇದನ್ನು ವಿರೋಧಿಸಿದ್ದ ಬಿಜೆಪಿ, ಸುದರ್ಶನ್ ಅವರು ಕೋಲಾರ ಜಿಲ್ಲೆಯ ವೇಮಗಲ್ ನಲ್ಲಿ ಸರ್ಕಾರಿ ಭೂಮಿ ಕಬಳಿಸಿ ವಾಣಿಜ್ಯ ಮಳಿಗೆ ನಿರ್ಮಿಸಿದ್ದಾರೆ, ಆದ್ದರಿಂದ ಅವರನ್ನು ಕೆಪಿಎಸ್ಸಿಗೆ ನೇಮಿಸಬಾರದು ಎಂದು ರಾಜ್ಯಪಾಲರಿಗೆ ದೂರು ನೀಡಿತ್ತು.
ಬಿಜೆಪಿ ದೂರಿನ ಹಿನ್ನೆಲೆಯಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಆರೋಪದ ಕುರಿತು ವಿವರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ವರದಿಯನ್ನು ಸಲ್ಲಿಸಬೇಕೆಂದು ಸೂಚಿಸಿದ್ದಾರೆ.
ವಿ.ಆರ್ ಸುದರ್ಶನ್ ಅವರನ್ನು ಕೆ.ಪಿ.ಎಸ್.ಸಿ ಅಧ್ಯಕ್ಷ ಹುದ್ದೆಗೆ ನೇಮಿಸುವ ಮೂಲಕ ಲೋಕಸೇವಾ ಆಯೋಗವನ್ನು ಸಿದ್ದರಾಮಯ್ಯ ಸರ್ಕಾರ ಕಾಂಗ್ರೆಸ್ ನ ಪುನರ್ವಸತಿ ಕೇಂದ್ರದ ರೀತಿ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು.