ನವದೆಹಲಿ : ವಿವಾದಿತ ಮೆಸೆಂಜರ್ ಆಫ್ ಗಾಡ್ ಚಿತ್ರಕ್ಕೆ ಅನುಮತಿ ನೀಡುವ ವಿವಾದದಿಂದಾಗಿ ಲೀಲಾ ಸ್ಯಾಮ್ಸನ್ ರಾಜೀನಾಮೆಯಿಂದ ತೆರವಾಗಿದ್ದ ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿ ಅಧ್ಯಕ್ಷ ಹುದ್ದೆಗೆ ಹಿರಿಯ ಚಿತ್ರ ನಿರ್ಮಾಣಕಾರ ಪೆಹ್ಲಾಜ್ ನಿಹಲಾನಿ ಅವರನ್ನು ನೇಮಿಸಲಾಗಿದೆ.
ಪೆಹ್ಲಾಜ್ ಜೊತೆಗೆ 9 ಸದಸ್ಯರನ್ನೂ ಮಂಡಳಿಗೆ ನೇಮಕ ಮಾಡಲಾಗಿದೆ. 2015ರ ಜ.19ರಿಂದ ಜಾರಿಗೆ ಬರುವಂತೆ ಇವರ ಅಧಿಕಾರಾವಧಿ 3 ವರ್ಷ. ಲೀಲಾ ಸ್ಯಾಮ್ಸನ್ ಜೊತೆಗೆ ಉಳಿದ ಸದಸ್ಯರೂ ರಾಜೀನಾಮೆ ನೀಡಿದ್ದರಿಂದ ಎಲ್ಲ ಹುದ್ದೆಗಳು ಖಾಲಿಯಾಗಿದ್ದವು.
ಪೆಹ್ಲಾಜ್ ನಿಹಲಾನಿ ಅವರು ಬಿಜೆಪಿ ನಾಯಕ, ನಟ ಶತ್ರುಘ್ನ ಸಿನ್ಹಾ ಅವರ ಪತ್ನಿಯ ಸೋದರ. ಇನ್ನು ಸಮಿತಿಗೆ ನೇಮಕವಾಗಿರುವ ಉಳಿದ ಸದಸ್ಯರೆಂದರೆ ಬಿಜೆಪಿ ನಾಯಕಿ ವಾಣಿ ತ್ರಿಪಾಠಿ ಟಿಕೂ, ಚಿತ್ರನಿರ್ಮಾಣಕಾರರಾದ ಅಶೋಕ್ ಪಂಡಿತ್, ಡಾ. ಚಂದ್ರಪ್ರಕಾಶ್ ದ್ವಿವೇದಿ, ನಟರಾದ ಜಾರ್ಜ್ ಬೇಕರ್, ಎಸ್.ವಿ.ಶೇಖರ್, ಜೀವಿತಾ, ಸಿನಿ ಲೇಖಕ ಮಿಹಿರ್ ಭೂಟಾ, ಪ್ರೊ. ಸೈಯದ್ ಅಬ್ದುಲ್ ಬರಿ, ರಮೇಶ್ ಪತಂಗೆ.