ಬೆಂಗಳೂರು : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕಳೆದ ಮೂರೂವರೆ ವರ್ಷಗಳಿಂದ ಜೈಲಿನಲ್ಲಿದ್ದ ಗಣಿ ಧಣಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಸುಪ್ರೀಂ ಕೋರ್ಟ್ ನಿಂದ ಜಾಮೀನು ಮಂಝುರಾದ ಹಿನ್ನಲೆಯಲ್ಲಿ ಜನಾರ್ದರ ರೆಡ್ಡಿ ಪರ ವಕೀಲ ಮುನಿರೆಡ್ಡಿ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕ ಜಯಸಿಂಹ ಅವರನ್ನು ಭೇಟಿ ಮಾಡಿ ಜಾಮೀನಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು. ಬಳಿಕ ರೆಡ್ಡಿಯನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು.
ಜೈಲಿನಿಂದ ಹೊರಬಂದ ಜನಾರ್ದನ ರೆಡ್ಡಿಗೆ ಪತ್ನಿ ಅರುಣಾ ಹಾಗೂ ಇಬ್ಬರು ಮಕ್ಕಳು, ಸಹೋದರ ಸೋಮಶೇಖರ ರೆಡ್ಡಿ, ಸ್ನೇಹಿತ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕ ಸುರೇಶ್ ಬಾಬು, ಮಾಜಿ ಸಂಸದೆ ಜೆ. ಶಾಂತಾ ಸೇರಿದಂತೆ ಹಲವು ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದರು.
ಬಳ್ಳಾರಿಗೆ ಹೋಗುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಷರತ್ತು ವಿಧಿಸಿದ ಹಿನ್ನೆಲೆಯಲ್ಲಿ ರೆಡ್ಡಿ ಜೈಲಿನಿಂದ ನೆರವಾಗಿ ಬೆಂಗಳೂರಿನ ಚಾಲುಕ್ಯ ಸರ್ಕಲ್ನಲ್ಲಿರುವ ಪಾರಿಜಾತ ನಿವಾಸಕ್ಕೆ ತೆರಳುತಿದ್ದಾರೆ.
ರೆಡ್ಡಿ ಬಿಡುಗಡೆ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಸುತ್ತಮುತ್ತ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತಲ್ಲದೇ ಜ.22ರಿಂದಲೇ ಜೈಲಿನ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ನೆ ಜಾರಿಗೊಳಿಸಲಾಗಿತ್ತು.
ಕಳೆದ ಮಂಗಳವಾರ ಒಬಳಾಪುರಂ ಕಂಪನಿಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಅಕ್ರಮ ಗಣಿಗಾರಿಕೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಸೆಪ್ಟೆಂಬರ್ 5, 2011ರಲ್ಲಿ ಜನಾರ್ದನ ರೆಡ್ಡಿ ಹಾಗೂ ಒಬಳಾಪುರಂ ಮೈನಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ಸಂಬಂಧಿ ಬಿ.ವಿ.ಶ್ರೀನಿವಾಸ್ ರೆಡ್ಡಿ ಅವರನ್ನು ಸಿಬಿಐ ಬಂಧಿಸಿತ್ತು.