ನವದೆಹಲಿ : 'ಎನ್.ಡಿ.ಎ' ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಅಮೆರಿಕಾದೊಂದಿಗೆ ಅಣು ಒಪ್ಪಂದ ಸೇರಿದಂತೆ ಹಲವು ವಿಷಯಗಳಲ್ಲಿ ಕೇಂದ್ರ ಸರ್ಕಾರ ಉಲ್ಟಾ ಹೊಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುಪಿಎ ಸರ್ಕಾರ ಅಮೆರಿಕಾದೊಂದಿಗೆ ಅಣು ಒಪ್ಪಂದಕ್ಕೆ ಸಹಿ ಹಾಕಬೇಕಾದರೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೇ ದೇಶದ ಹಿತಾಸಕ್ತಿಗೆ ವಿರುದ್ಧವಾದದ್ದು ಎಂದು ಟೀಕಿಸಿತ್ತು. ಆದರೆ ಈಗ ಅದೇ ಎನ್.ಡಿ.ಎ ಸರ್ಕಾರ ಅಮೆರಿಕಾದೊಂದಿಗೆ ಅಣು ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.
ಇದೇ ವೇಳೆ ಎನ್.ಡಿ.ಎ ಸರ್ಕಾರಕ್ಕೆ ಸಲಹೆ ನೀಡಿರುವ ದಿಗ್ವಿಜಯ್ ಸಿಂಗ್, ನರೇಂದ್ರ ಮೋದಿ ಸರ್ಕಾರ ದೇಶದ ಹಿತಾಸಕ್ತಿಗೆ ಧಕ್ಕೆಯಾಗದಂತೆ ಅಣು ಒಪ್ಪಂದವನ್ನು ಜಾರಿಗೆ ತರಬೇಕೆಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆ, ಆರ್.ಎಸ್.ಎಸ್ ನ ಯೋಜನೆಗಳಿಗೆ ಸಂಪೂರ್ಣ ತದ್ವಿರುದ್ಧವಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಮತಯಾಚಿಸಿ ಅಧಿಕಾರಕ್ಕೆ ಬಂದವರು ಇಂದು ಘರ್ ವಾಪಸಿಯಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅಭಿವೃದ್ಧಿಗೆ ಮಾರಕವಾಗಿದ್ದಾರೆ ಎಂದು ಆರ್.ಎಸ್.ಎಸ್ ವಿರುದ್ಧ ದಿಗ್ವಿಜಯ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.