ಪಾಟ್ನಾ : ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆಗಳ ವರದಿಗಳನ್ನು ತಳ್ಳಿಹಾಕಿದ್ದಾರೆ.
ಮುಂಬರುವ ಬಿಹಾರ ವಿಧಾನಸಭಾ ಚುನಾವಣೆ ತಯಾರಿ ಬಗ್ಗೆ ಜೆಡಿಯು ರಾಷ್ಟ್ರಾಧ್ಯಕ್ಷ ಶರದ್ ಯಾದವ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿವಾಸದಲ್ಲಿ ಚರ್ಚೆ ನಡೆಸಿದ್ದಾರೆ. ಈ ಸಭೆಗೆ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಗೈರಾಗಿದ್ದದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆದರೂ ಮಾತನಾಡಿದ ಮಾಂಝಿ ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಿತೀಶ್ ಕುಮಾರ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಬಿಹಾರದ ಮುಖ್ಯಮಂತ್ರಿ ಬದಲಾವಣೆ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಲು ನಿರಾಕರಿಸಿರುವ ಶರದ್ ಯಾದವ್, ಸಿ.ಎಂ ಜಿತನ್ ರಾಮ್ ಮಾಂಝಿ ನಮ್ಮ ಚರ್ಚೆಯ ವಿಷಯವಾಗಿರಲಿಲ್ಲ ಎಂದು ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವ ತಯಾರಿ ನಡೆಯುತ್ತಿದೆ. ದೆಹಲಿ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಈ ಪ್ರಕ್ರಿಯೆ ಮತ್ತಷ್ಟು ಚುರುಕು ಪಡೆಯುವ ಸಾಧ್ಯತೆ ಇದೆ.