ನವದೆಹಲಿ : ವಿದೇಶದಲ್ಲಿ ಕಪ್ಪು ಹಣ ಹೊಂದಿರುವ ಭಾರತೀಯರ ವಿರುದ್ಧ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಲು ಮುಂದಾಗಿರುವ ಬೆನ್ನಲ್ಲೇ ಸ್ವಡ್ಜರ್ಲೆಂಡ್ ನಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಜಿನಿವಾದಲ್ಲಿರುವ ಹೆಚ್ ಎಸ್ ಬಿ ಸಿ ಬ್ಯಾಂಕ್‌ನಲ್ಲಿ ಕಪ್ಪು ಹಣದ ಖಾತೆ ಹೊಂದಿದ್ದ 1, 195 ಭಾರತೀಯರ ಹೆಸರನ್ನು ಬಿಡುಗಡೆ ಮಾಡಲಾಗಿದೆ. ಭಾರತದ ಖ್ಯಾತ ಉದ್ಯಮಿಗಳು, ರಾಜಕಾರಣಿಗಳು, ಬಾಲಿವುಡ್ ತಾರೆಯರ ಹೆಸರು ಸೇರಿದಂತೆ ಒಟ್ಟು 1,195 ಮಂದಿಯ ಖಾತೆಗಳ ವಿವರ ಲಭ್ಯವಾಗಿದ್ದು, ಎಲ್ಲಾ ಖಾತೆಗಳು ಸೇರಿ ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ 25,420 ಕೋಟಿ ರುಪಾಯಿ ಕಪ್ಪು ಹಣ ಪತ್ತೆಯಾಗಿದೆ.
ಹೆಚ್ ಎಸ್ ಬಿಸಿ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವುದಾಗಿ 250 ಜನರು ಒಪ್ಪಿಕೊಂಡಿದ್ದು, ಅವರಲ್ಲಿ 60 ಜನರ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.
ಖ್ಯಾತ ಉದ್ಯಮಿಗಳಾದ ಅನಿಲ್ ಅಂಬಾನಿ, ಮುಖೇಶ್ ಅಂಬಾನಿ, ಡಾಬರ್ ಗ್ರೂಪ್ ಮುಖ್ಯಸ್ಥ ಬರ್ಮನ್, ಡಾಲ್ಮಿಯ ಗ್ರೂಪ್ ಅಧ್ಯಕ್ಷ ಅನುರಾಗ್ ಡಾಲ್ಮಿಯಾ, ಖ್ಯಾತ ಉದ್ಯಮಿ ಮನು ಚಾಬ್ರಿಯಾ, ನರೇಶ್ ಗೋಯಲ್, ಮಾಜಿ ಸಂಸದೆ ಅನು ಟಂಡನ್, ಪರಣಿತ್ ಕೌರ್, ಹರ್ಷದ್ ಮೇಹ್ತಾ, ಭದ್ರಾಶ್ಯಾಂ ಹರ್ಷದ್, ಜಿತೇಂದ್ರ ಪಾರಿಖ್,ಗುಪ್ತ ಶರವಣ್, ಉತ್ತಮ್ ಚಂದ್, ದೋಪಾಲ್ ದಾಸ್, ವಧುಮಾಲ್ ಮತ್ತು ಕುಟುಂಬ ಸೇರಿದಂತೆ 60 ಖಾತೆದಾರರ ಹೆಸರನ್ನು ಬಿಡುಗಡೆಮಾಡಲಾಗಿದೆ.
ಈ ಕುರಿತು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, 35೦ ಖಾತೆದಾರರ ಬಗ್ಗೆ ವಿಚಾರಣೆ ನಡೆಸಲಾಗಿದ್ದು, ಮಾ.31ರೊಳಗೆ ಉಳಿದ ಖಾತೆದಾರ ಬಗ್ಗೆ ವಿಚಾರಣೆ ನಡೆಸಲಾಗುತ್ತದೆ. ಎಲ್ಲಾ ಖಾತೆದಾರರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಮುಂದಿನ 7-8ತಿಂಗಳ ತನಿಖೆಯಲ್ಲಿ ಪ್ರಗತಿ ಸಾಧಿಸಲಿದ್ದೇವೆ. ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ನಾಲ್ಕೈದು ವರ್ಷಗಳ ಹಿಂದೆಯೇ ವಿದೇಶದಲ್ಲಿ ಖಾತೆಹೊಂದಿರುವ ಬಗ್ಗೆ ಮಾಹಿತಿ ಇತ್ತು. 2014ರಲ್ಲಿ ನಾವು ತನಿಖೆ ಆರಂಭಿಸಿದ್ದು, ವಿಶೇಷ ತನಿಖಾ ದಳದಿಂದ ತನಿಖೆ ಪ್ರಗತಿಯಲ್ಲಿದೆ. ವಿದೇಶದಲ್ಲಿ ಖಾತೆಹೊಂದಿರುವವರ ವಿರುದ್ಧ ಕಣಿಣ ಕ್ರಮ ಕೈಗೊಳ್ಳುವುದಾಗಿ ಜೇಟ್ಲಿ ತಿಳಿಸಿದ್ದಾರೆ.