ನವದೆಹಲಿ : 'ದೆಹಲಿ' ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಂಟಾಗಿರುವ ಸೋಲಿನ ಬಗ್ಗೆ ಶೀಲಾ ದೀಕ್ಷಿತ್ ಅಸಮಾಧಾನ ವ್ಯಕ್ತಪಡಿಸಿದ್ದು, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಅಜಯ್ ಮಕೇನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಟೈಮ್ಸ್ ನೌ ಚಾನೆಲ್ ನೊಂದಿಗೆ ಮಾತನಾಡಿರುವ ಶೀಲಾ ದೀಕ್ಷಿತ್, ಅಜಯ್ ಮಕೇನ್ ಅವರು ಚುನಾವಣಾ ಪ್ರಚಾರದ ಮುಖ್ಯಸ್ಥರಾಗಿದ್ದರು, ಕಾಂಗ್ರೆಸ್ ಪರ ಪ್ರಚಾರ ಉತ್ಸಾಹಭರಿತವಾಗಿರಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ 15 ವರ್ಷ ದೆಹಲಿಯಲ್ಲಿ ಕಾಂಗ್ರೆಸ್ ಮಾಡಿರುವ ಸಾಧನೆಯನ್ನು ಜನರಿಗೆ ತಿಳಿಸಲು ಅಜಯ್ ಮಕೇನ್ ವಿಫಲರಾಗಿದ್ದಾರೆ. ಅಜಯ್ ಮಕೇನ್ ಬಗ್ಗೆ ಏನು ಹೇಳಲು ಸಾಧ್ಯವಿಲ್ಲ. ಅವರ ವೈಫಲ್ಯಕ್ಕಾಗಿ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ದೆಹಲಿಯಲ್ಲಿ ನಾಮಾವಶೇಷವಾಗುವುದಕ್ಕೆ ಸರಿಯಾಗಿ ಕಾರ್ಯತಂತ್ರ ರೂಪಿಸದಿರುವುದೇ ಕಾರಣ ಎಂದು ಶೀಲಾ ದೀಕ್ಷಿತ್ ಹೇಳಿದ್ದಾರೆ.
ದೆಹಲಿಯಲ್ಲಿ ಶೂನ್ಯ ಸಂಪಾದನೆ ಮಾಡಿದರೂ ಸಹ ಕಾಂಗ್ರೆಸ್ ನಿರ್ನಾಮವಾಗಿದೆ ಎಂಬುದನ್ನು ಒಪ್ಪಲು ತಯಾರಿಲ್ಲ, ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದರೆ ಉತ್ತಮ ಫಲಿತಾಂಶ ದೊರೆಯುತ್ತಿತ್ತು ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಅಭಿಪ್ರಾಯಪಟ್ಟಿದ್ದಾರೆ.