ಬೆಂಗಳೂರು : ಚುನಾವಣಾ ರಾಜಕಾರಣದಿಂದ ಬೇಸತ್ತು ’ಇದು ನನ್ನ ಕಟ್ಟಕಡೆಯ ಹೋರಾಟ ಇನ್ನು ಮುಂದೆ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು 2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಯೂ ಟರ್ನ್ ತೆಗೆದುಕೊಂಡಿದ್ದು, 2018ರ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ್ದಾರೆ.
ಹಠಾತ್ ನಿಲುವು ಬದಲಾವಣೆಗೆ ರಾಜ್ಯ ಹಾಗೂ ದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸುತ್ತೇವೆ ಎನ್ನುತ್ತಿರುವ ಬಿಜೆಪಿಯೇ ಕಾರಣ. ಕಾಂಗ್ರೆಸ್ ಹಠಾವೋ ಎನ್ನುವ ಬಿಜೆಪಿಯನ್ನು ರಾಜ್ಯದಲ್ಲಿ ನಿರ್ಮೂಲನ ಮಾಡಲು 2018ರ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವುದಾಗಿ ತಿಳಿಸಿದ್ದಾರೆ.
ಮುಂದಿನ 3 ವರ್ಷ 3 ತಿಂಗಳು ರಾಜ್ಯದಲ್ಲಿ ನಾನೇ ಮುಖ್ಯಮಂತ್ರಿಯಾಗಿದ್ದು ಅವಧಿ ಪೂರೈಸುತ್ತೇನೆ. ಮುಂದಿನ ಚುನಾವಣೆಯೂ ನನ್ನ ನೇತೃತ್ವದಲ್ಲೇ ನಡೆಯಲಿದೆ
ಎಂದು ಪ್ರಕಟಿಸಿದ್ದಾರೆ.
ದಲಿತ ಮುಖ್ಯಮಂತ್ರಿ ವಿಚಾರವನ್ನು ಪ್ರಸ್ತಾವಿಸಿರುವ ಅವರು, ದಲಿತರೊಬ್ಬರು ಕರ್ನಾಟಕದ ಮುಖ್ಯಮಂತ್ರಿ ಯಾಗಬೇಕು ಎಂದು ನಾನೂ ಹೇಳುತ್ತೇನೆ. ದಲಿತ ಮುಖ್ಯಮಂತ್ರಿ ಕನಸು ನನಸಾಗುವುದು ಕಾಂಗ್ರೆಸ್ನಲ್ಲಿ ಮಾತ್ರ ಸಾಧ್ಯ. ಕಾಂಗ್ರೆಸ್ ಈ ಹಿಂದೆ ಬಿಹಾರ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಿದ ಉದಾಹರಣೆಯಿದೆ ಎಂದೂ ಹೇಳಿದ್ದಾರೆ.
ಚುನಾವಣಾ ರಾಜಕೀಯ ನಿವೃತ್ತಿ ವಿಚಾರವನ್ನು ಪ್ರಸ್ತಾವಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದಿನ ಚುನಾವಣಾ ವ್ಯವಸ್ಥೆಯಿಂದ ಬೇಸತ್ತು ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದು ನಿಜ. ಆದರೆ, ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ, ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವುದಾಗಿ ಹೇಳುತ್ತಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಬಿಜೆಪಿಯನ್ನು ನಿರ್ಮೂಲನ ಮಾಡಬೇಕು ಎಂದು ನನ್ನ ನಿಲುವು ಬದಲಿಸಿಕೊಂಡಿದ್ದು, 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದರು.