ಪಾಟ್ನಾ : ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಭಾನುವಾರ ಸಂಜೆ 5 ಗಂಟೆಗೆ ನಾಲ್ಕನೇ ಬಾರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಜೆಡಿಯು ನಿರ್ಧಾರದ ವಿರುದ್ಧ ಬಂಡೆದ್ದಿದ್ದ ಜಿತನ್ ರಾಂ ಮಾಂಜಿ ಅವರು ವಿಶ್ವಾಸಮತ ಸಾಬೀತಿಗೂ ಮೊದಲೇ ಸೋಲೊಪ್ಪಿಕೊಂಡು ರಾಜಿನಾಮೆ ನೀಡಿದ್ದರು. ನಿತೀಶ್ ಕುಮಾರ್ ತಮ್ಮ ಜತೆ ಯಾರ್ಯಾರು ಮಂತ್ರಿಗಳಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ ಎಂಬ ಪಟ್ಟಿ ಸಿದ್ಧ ಪಡಿಸಿಕೊಂಡಿದ್ದಾರೆ.
ಸದ್ಯಕ್ಕೆ ಜೆಡಿಯುಗೆ ಬಾಹ್ಯಬೆಂಬಲ ನೀಡಿರುವ ಆರ್ ಜೆಡಿ(24 ಸದಸ್ಯರು), ಕಾಂಗ್ರೆಸ್-(5, ಸಿಪಿಐ(1) ಹಾಗೂ ಸ್ವತಂತ್ರ(1) ಶಾಸಕರು ಸರ್ಕಾರದ ಭಾಗವಾಗಲಿದ್ದಾರೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಸರ್ಕಾರದ ಭಾಗವಾಗಬೇಕೇ, ಬೇಡವೇ ಎನ್ನುವುದನ್ನು ನಿತೀಶ್ ಸದನದಲ್ಲಿ ಬಹುಮತ ಸಾಬೀತುಪಡಿಸಿದ ಬಳಿಕ ನಿರ್ಧರಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.