ನವದೆಹಲಿ : 'ಜಮ್ಮು-ಕಾಶ್ಮೀರ'ದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಪಿಡಿಪಿ ಮುಖ್ಯಸ್ಥ ಮುಫ್ತಿ ಮೊಹಮದ್ ಸಯೀದ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
ಮೋದಿ ಅವರನ್ನು ಭೇಟಿ ಬಳಿಕ ಮಾತನಾಡಿದ ಮೊಹಮದ್ ಸಯೀದ್, 13 ವರ್ಷಗಳ ನಂತರ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವುದು ಸಂತಸ ಉಂಟುಮಾಡಿದೆ ಎಂದು ಹೇಳಿದ್ದಾರೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಬಗ್ಗೆ ನಡೆಸಿರುವ ಚರ್ಚೆ ಫಲಪ್ರದವಾಗಿದೆ ಎಂದು ಮುಫ್ತಿ ಮೊಹಮದ್ ಸಯೀದ್ ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರವನ್ನು ಶಾಂತಿಯ ದ್ವೀಪವನ್ನಾಗಿ ಮಾಡುವ ಮೂಲಕ ಪಾಕಿಸ್ತಾನವನ್ನು ಆಕರ್ಷಿಸಬೇಕು ಎಂಬ ತಮ್ಮ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಂಚಿಕೊಂಡಿರುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮುಫ್ತಿ ಮೊಹಮದ್ ಸಯೀದ್ ತಿಳಿಸಿದ್ದಾರೆ.
ಫೆ.24ರಂದು ಪಿಡಿಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಜಮ್ಮು-ಕಾಶ್ಮೀರದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯನ್ನು ಖಚಿತಪಡಿಸಿದ್ದರು.