ನವದೆಹಲಿ : ಬಜೆಟ್ ಮಂಡನೆ ಮುಗಿಯುತ್ತಿದ್ದಂತೆಯೇ ಮತ್ತೆ ತೈಲ ಕಂಪನಿಗಳು ಗ್ರಾಹಕರಿಗೆ ಶಾಕ್ ನೀಡಿದ್ದು, ಪೆಟ್ರೋಲ್ ದರವನ್ನು ಲೀಟರಿಗೆ 3.18 ರೂ. ಮತ್ತು ಡೀಸೆಲ್ ದರವನ್ನು 3.09 ರೂ.ನಷ್ಟು ಹೆಚ್ಚಿಸಿವೆ.
ಪರಿಷ್ಕೃತ ದರ ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಕಚ್ಚಾ ತೈಲ ದರವು 45 ಡಾಲರ್ ಇದ್ದದ್ದು, ಈಗ 65ರ ಆಸುಪಾಸು ಬಂದಿದೆ. ರೂಪಾಯಿ ಮೌಲ್ಯ ಕೂಡ ಡಾಲರ್ ಎದುರು ಅಲ್ಪ ಕುಸಿದ ಹಿನ್ನೆಲೆಯಲ್ಲಿ ದರ ಹೆಚ್ಚಿಸಲಾಗಿದೆ ಎಂದು ತೈಲ ಕಂಪನಿಗಳು ಹೇಳಿವೆ.
ಪೆಟ್ರೋಲ್ ದರ ವಿನಿಯಂತ್ರಣ ಆದ ನಂತರ ಆಗಸ್ಟ್ ನಿಂದ ಈಚೆಗೆ ದರವು 17 ರೂ.ನಷ್ಟು ಇಳಿದಿತ್ತು. ಡೀಸೆಲ್ ದರ ಕೂಡ 13 ರೂ. ಇಳಿದಿತ್ತು. ಆದರೆ ಫೆಬ್ರವರಿ ಮಧ್ಯಭಾಗದಿಂದ ಮತ್ತೆ ಏರಿಕೆ ಪ್ರಕ್ರಿಯೆ ಆರಂಭವಾಗಿದ್ದು, ಸತತ 2ನೇ ಬಾರಿಗೆ ಈಗ ದರ ಹೆಚ್ಚಳವಾಗಿದೆ.
ತೈಲ ಬೆಲೆ ಹೆಚ್ಚಳವು ಗಾಯದ ಮೇಲೆ ಬರೆ ಎಳೆದಂತಿದೆ. ಅಚ್ಛೇದಿನದ ಅಹಂಕಾರವಾಗಿದೆ ಎಂದು ಕಾಂಗ್ರೆಸ್ ಮತ್ತು ಟಿಎಂಸಿ ಟೀಕಿಸಿವೆ.