ಬೆಂಗಳೂರು : ದಕ್ಷ ಐಎಎಸ್ ಅಧಿಕಾರಿ ಡಿ.ಕೆ ರವಿ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವುದು ಸೂಕ್ತ ಎಂದು ರಾಜ್ಯಪಾಲ ವಜುಭಾಯ್ ವಾಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ.
ರವಿ ಅವರ ನಿಗೂಢ ಸಾವಿನ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರಿಗೆ ವಿವರಣೆ ನೀಡಿದ ಸಂದರ್ಭದಲ್ಲಿ ರಾಜ್ಯಪಾಲರು ಈ ಸಲಹೆ ನೀಡಿದ್ದಾರೆ. ವಿಪಕ್ಷಗಳ ದೂರಿನ ಹಿನ್ನೆಲೆಯಲ್ಲಿ ರಾಜ್ಯಪಾಲರು ಸಿದ್ದರಾಮಯ್ಯ ಅವರನ್ನು ರಾಜಭವನಕ್ಕೆ ಕರೆಸಿ ಡಿ.ಕೆ ರವಿ ಸಾವಿನ ಪ್ರಕರಣದ ವಿವರಣೆ ನೀಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ರಾಜಭವನಕ್ಕೆ ತೆರಳಿದ್ದ ಸಿ.ಎಂ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಾಜ್ಯಪಾಲರಿಗೆ ವಿವರಣೆ ನೀಡಿ ಪ್ರಕರಣದ ತನಿಖೆ ಸಿಐಡಿ ನಡೆಸುತ್ತಿದೆ ಎಂದು ಹೇಳಿದ್ದಾರೆ.
ರವಿ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿ ಮಾ.19ರಂದು ವಿರೋಧ ಪಕ್ಷದ ಸದಸ್ಯರು ರಾಜ್ಯಪಾಲ ವಜುಭಾಯ್ ವಾಲ ಅವರಿಗೆ ಮನವಿ ಸಲ್ಲಿಸಿದ್ದರು. ಸಿದ್ದರಾಮಯ್ಯ ಅವರನ್ನು ಕರೆಸಿ ಪ್ರಕರಣದ ಬಗ್ಗೆ ವಿವರಣೆ ಪಡೆಯುವುದಾಗಿ ರಾಜ್ಯಪಾಲರು ಜೆಡಿಎಸ್-ಬಿಜೆಪಿಗೆ ಭರವಸೆ ನೀಡಿದ್ದರು. ಅಲ್ಲದೇ ಸಿಬಿಐ ತನಿಖೆಗೆ ವಹಿಸುವಂತೆ ಸಲಹೆ ನೀಡುವುದಾಗಿ ರಾಜ್ಯಪಾಲರು ಹೇಳಿದ್ದರು.
ಸಿಬಿಐ ತನಿಖೆಗೆ ಒತ್ತಾಯಿಸಿ ರಾಜ್ಯಾದ್ಯಂತ ತೀವ್ರ ಪ್ರತಿಭಟೆನೆ ನಡೆಯುತ್ತಿರುವ ಹಿನ್ನಲೆಯಲ್ಲಿ ಹಾಗೂ ರಾಜ್ಯಪಾಲರ ಸಲಹೆ ಮೇರೆಗೆ ಈಗಾಲಾದರೂ ಸಿದ್ದರಾಮಯ್ಯ ತಮ್ಮ ನಿರ್ಧಾರವನ್ನು ಬದಲಿಸುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.