ನವದೆಹಲಿ : 1992 ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬಿಜೆಪಿಯ ಹಿರಿಯ ನಾಯಕರಿಗೆ ನೋಟಿಸ್ ಜಾರಿ ಮಾಡಿದೆ.
ಬಿಜೆಪಿ ನಾಯಕರಾದ ಎಲ್.ಕೆ.ಅಡ್ವಾಣಿ, ಸಚಿವೆ ಉಮಾ ಭಾರತಿ, ಮುರಳಿ ಮನೋಹರ ಜೋಶಿ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಸೇರಿದಂತೆ 20 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಸಿಬಿಐಗೂ ನೋಟಿಸ್ ಜಾರಿಗೊಳಿಸಿರುವ ಸುಪ್ರೀಂ ಕೋರ್ಟ್, ನೋಟಿಸ್ ಗೆ ಉತ್ತರಿಸಲು ನಾಲ್ಕು ವಾರಗಳ ಗಡುವು ನೀಡಿದೆ.
1992ರಲ್ಲಿ 16ನೇ ಶತಮಾನದ ಬಾಬ್ರಿ ಮಸೀದಿಯನ್ನು ಹಿಂದೂ ಕಾರ್ಯಕರ್ತರು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡ್ವಾಣಿ ಸೇರಿದಂತೆ 20 ಮಂದಿ ವಿರುದ್ಧದ ಸಂಚಿನ ಆರೋಪವನ್ನು ಅಲಹಾಬಾದ್ ಹೈಕೋರ್ಟ್ ಕೈಬಿಟ್ಟಿತ್ತು.
ಈ ಕ್ರಮವನ್ನು ಪ್ರಶ್ನಿಸಿ ಮೆಹಬೂಬ್ ಅಹ್ಮದ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.