ನವದೆಹಲಿ : 'ರಾಹುಲ್ ಗಾಂಧಿ', ಸೋನಿಯಾ ಗಾಂಧಿ ನಾಯಕತ್ವಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಲ್ಲೇ ಭಿನ್ನಮತ ಕಾಣಿಸಿಕೊಂಡಿದೆ. ಸೋನಿಯಾ ಗಾಂಧಿ ನಾಯಕತ್ವದ ಪರ ದೆಹಲಿ ಮಾಜಿ ಸಿ.ಎಂ ಶೀಲಾ ದೀಕ್ಷಿತ್ ಬ್ಯಾಟಿಂಗ್ ನಡೆಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೀಲಾದೀಕ್ಷಿತ್, ಸೋನಿಯಾ ಗಾಂಧಿ ಯಾವುದೇ ರಾಜಕೀಯ ಜವಾಬ್ದಾರಿಗಳಿಂದ ಕಳಚಿಕೊಳ್ಳುವುದಿಲ್ಲ. ಕಾಂಗ್ರೆಸ್ ಪಕ್ಷ ಪುನಶ್ಚೇತನಗೊಳ್ಳಲು ಸೋನಿಯಾ ಗಾಂಧಿ ನಾಯಕತ್ವವನ್ನೇ ಅವಲಂಬಿಸಿದೆ ಎಂದು ಶೀಲಾ ದೀಕ್ಷಿತ್ ಸ್ಪಷ್ಟಪಡಿಸಿದ್ದಾರೆ.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನಾಯಕತ್ವದ ಗುಣಗಳು ಪ್ರಶ್ನಾರ್ಹವಾಗಿವೆ, ಆದ್ದರಿಂದ ಸೋನಿಯಾ ಗಾಂಧಿ ಅವರೇ ಕಾಂಗ್ರೆಸ್ ಪಕ್ಷದ ನಾಯಕತ್ವವನ್ನು ಮುನ್ನಡೆಸಬೇಕೆಂದು ಶೀಲಾ ದೀಕ್ಷಿತ್ ಒತ್ತಾಯಿಸಿದ್ದಾರೆ. ಶೀಲಾ ದೀಕ್ಷಿತ್ ಅವರ ಈ ಹೇಳಿಕೆಯಿಂದ ನಾಯಕತ್ವಕ್ಕೆ ಸಂಬಂಧಿಸಿದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಭಿನ್ನಮತ ಕಾಣಿಸಿಕೊಂಡಿರುವುದು ಸ್ಪಷ್ಟವಾಗಿದೆ.
ಸಂಸತ್ ಅಧಿವೇಶನಕ್ಕೂ ಚಕ್ಕರ್ ಹೊಡೆದು ವಿದೇಶ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಭಾರತಕ್ಕೆ ಆಗಮಿಸಿದ ಬೆನ್ನಲ್ಲೇ ಎಐಸಿಸಿ ಅಧಿವೇಶನ ನಡೆಸಿ ಅವರಿಗೆ ಅಧ್ಯಕ್ಷ ಗಾದಿಯ ಜವಾಬ್ದಾರಿ ನೀಡಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದಕ್ಕೆ ಕಾಂಗ್ರೆಸ್ ನಲ್ಲೇ ವಿರೋಧ ವ್ಯಕ್ತವಾಗಿದ್ದು, ಸೋನಿಯಾ ಗಾಂಧಿಯೇ ಅಧ್ಯಕ್ಷರಾಗಿ ಮುಂದುವರೆಯಬೇಕೆಂಬ ಕೂಗು ಕೇಳಿಬರುತ್ತಿದೆ.