ಜಮ್ಮು-ಕಾಶ್ಮೀರ : 'ಕಾಶ್ಮೀರ' ಪ್ರತ್ಯೇಕತವಾದಿ ಮಸರತ್ ಆಲಂ ವಿರುದ್ಧ ಏ.23ರಂದು ಸಾರ್ವಜನಿಕ ಸುರಕ್ಷತೆ ಕಾಯ್ದೆಯನ್ನು ಹೇರಲಾಗಿದೆ.
ಭಾರತದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಧ್ರೋಹದ ಆರೋಪದಡಿ ಮಸರತ್ ಆಲಂ ನನ್ನು ಕಳೆದ ವಾರ ಬಂಧಿಸಲಾಗಿತ್ತು. ಇದೀಗ ಸಾರ್ವಜನಿಕ ಸುರಕ್ಷತೆಯ ಕಾಯ್ದೆ ಹೇರಲಾಗಿರುವುದರಿಂದ ಮಸರತ್ ಆಲಂ ಕನಿಷ್ಠ 2 ವರ್ಶಗಳ ಕಾಲ ಜೈಲು ವಾಸ ಅನುಭವಿಸಬೇಕಾಗಿದೆ. ಆಲಂ ವಿರುದ್ಧ 121ಎ( ದೇಶದ ವಿರುದ್ಧ ಸಮರ ಸಾರಿದ ಆರೋಪ) 124(ದೇಶಧ್ರೋಹ) 120(ಅಪರಾಧ ಸಂಚು) 147(ಗಲಭೆ) ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಜಮ್ಮು ಜೈಲಿಗೆ ಕಳಿಸಲಾಗಿದೆ.
ಮಸರತ್ ಆಲಂ ಜಾಮೀನು ಅರ್ಜಿ ಸಲ್ಲಿಸಿದ್ದು ಬಡ್ಗಮ್ ಕೋರ್ಟ್ ಏ.25ಕ್ಕೆ ಅರ್ಜಿಯ ಕುರಿತು ತೀರ್ಪನ್ನು ಕಾಯ್ದಿರಿಸಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ ಮಸರತ್ ಆಲಂ ವಿರುದ್ಧ ಸಾರ್ವಜನಿಕ ಸುರಕ್ಷತೆ ಕಾಯ್ದೆಯನ್ನು ಹೇರಿದೆ.
ಏ.15ರಂದು ಕಾಶ್ಮೀರದಲ್ಲಿ ನಡೆದಿದ್ದ ರ್ಯಾಲಿಯಲ್ಲಿ ಮಸರತ್ ಆಲಂ ಪಾಕಿಸ್ತಾನದ ಧ್ವಜ ಹಾರಿಸಿದ್ದೂ ಅಲ್ಲದೇ ಭಾರತದ ವಿರುದ್ಧ ಘೋಷಣೆ ಕೂಗಿದ್ದ.