ಎರ್ನಾಕುಲಂ : ಹದಿನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದ ಆರೋಪಕ್ಕೆ ಗುರಿಯಾಗಿರುವ ಕ್ಯಾಥೋಲಿಕ್ ಪಾದ್ರಿಗಾಗಿ ಕೇರಳ ಪೊಲೀಸರೀಗ ಹಲವರು ರಾಜ್ಯಗಳಲ್ಲಿ ಜಾಲ ಬೀಸಿದ್ದಾರೆ.
ಆರೋಪಿ ಪಾದ್ರಿಯ ವಿರುದ್ಧ ಲುಕ್ ಔಟ್ ನೊಟೀಸ್ ಜಾರಿ ಮಾಡಿರುವ ಕೇರಳ ಪೊಲೀಸರು, ವಿಮಾನ ನಿಲ್ದಾಣಗಳಲ್ಲಿ ಮತ್ತು ಗಡಿ ಪ್ರದೇಶಗಳಲ್ಲಿ ಈತನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಕೇರಳ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದ ಮೇ 5ರ ಬಳಿಕ ಅತ್ಯಾಚಾರ ಆರೋಪಿ ಫಾದರ್ ಎಡ್ವಿನ್ ಫಿಗರೆಜ್ ನಾಪತ್ತೆಯಾಗಿದ್ದಾರೆ. ಕೇರಳ ಪೊಲೀಸರು ಫಾದರ್ ಎಡ್ವಿನ್ ಗಾಗಿ ಕೇರಳದಲ್ಲಿ ಮಾತ್ರವಲ್ಲದೆ ಕರ್ನಾಟಕ ಮತ್ತು ದೆಹಲಿಯಲ್ಲಿ ಕೂಡ ಜಾಲ ಬೀಸಿದ್ದಾರೆ.
ಬಾಲಕಿಯು ತನ್ನ ಪಾಪ ನಿವೇದನೆಗಾಗಿ ಚರ್ಚಿಗೆ ಬಂದ ಸಂದರ್ಭದಲ್ಲಿ ಈ ವರ್ಷ ಜನವರಿ ಮತ್ತು ಮಾರ್ಚ್ ತಿಂಗಳ ಅವಧಿಯಲ್ಲಿ ಸುಮಾರು ಐದು ಬಾರಿ ಆಕೆಯ ಮೇಲೆ ಚರ್ಚ್ ಆವರಣದಲ್ಲೇ ಅತ್ಯಾಚಾರ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹತ್ತನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯು ಕಳೆದ ಒಂದು ವರ್ಷದಿಂದ ಚರ್ಚಿನ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಆರೋಪಿ ಪಾದ್ರಿಗೆ ನಿಕಟವಾಗಿ ಆತನೊಂದಿಗೆ ದುಡಿಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ನಿಗ್ರಹ ಕಾಯಿದೆಯಡಿ ಬಾಲಕಿಯ ಹೆತ್ತವರು ಈ ವರ್ಷ ಎಪ್ರಿಲ 1ರಂದು ಆರೋಪಿ ಪಾದ್ರಿಯ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದರು.