ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿದ್ದ ಬಹುಕೋಟಿ ಒಂದಂಕಿ ಅಕ್ರಮ ಲಾಟರಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಸಿಐಡಿ ಪೊಲೀಸರು ಐಜಿ ಮಟ್ಟದ 6 ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು. ಇಂದೂ ಕೂಡ ಅವರ ವಿಚಾರಣೆ ಮುಂ ದುವರೆಯಲಿದೆ. ಇದರ ಬೆನ್ನಲ್ಲೆ ಸಿಐಡಿ ಪೊಲೀಸರು ಮತ್ತೆ ಐಜಿ ಮಟ್ಟದ 6 ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಎಸ್ಪಿ ಚಂದ್ರಕಾಂತ್ ಸೇರಿದಂತೆ 6 ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಇನ್ನು
ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಅವರ ಆಪ್ತ ಸಹಾಯಕನಾಗಿದ್ದ ನಾಗರಾಜ್ ಅವರನ್ನು ಲಾಟರಿ ದಂಧೆ ಪ್ರಕರಣಕ್ಕೆ ಸಂಬಂಧಿಸಿ ಅಮಾನತುಗೊಳಿಸಲಾಗಿದೆ. ಕೆಲದಿನಗಳ ಹಿಂದೆ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಗಾರ್ಗ್ ಅವರ ಆಪ್ತ ಸಹಾಯಕರಾಗಿ ವರ್ಗಮಾಡಲಾಗಿತ್ತು. ಲಾಟರಿ ದಂಧೆಗೆ ಸಂಬಂಧಿಸಿ ಆರೋಪಿಯೊಬ್ಬನ ಪರವಾಗಿ ದೂರವಾಣಿ ಮೂಲಕ ನಾಗರಾಜು ಮಾತನಾಡಿದ್ದರು. ಈ ವಿಚಾರ ತಿಳಿದ ಪೊಲೀಸ್ ಮಹಾನಿರ್ದೇಶಕರು ವರ್ಗ ಮಾಡಿದ್ದರು. ಆರೋಪಿಯೊಂದಿಗೆ ನಂಟು ಹೊಂದಿರುವ ಆರೋಪ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ. ಪಾರಿರಾಜನ್ ಜತೆ ನಂಟು ಹೊಂದಿರುವ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ