ಸ್ವಿಜರ್ಲೆಂಡ್ : ಸ್ವಿಸ್ ಬ್ಯಾಂಕುಗಳಲ್ಲಿ ಕಪ್ಪುಹಣ ಇಟ್ಟಿರುವ ಕಾಳಧನಿಕರ ಹೆಸರುಗಳನ್ನು ಒಂದೊಂದಾಗಿ ಪ್ರಕಟಿಸುತ್ತಿರುವ ಸ್ವಿಜರ್ಲೆಂಡ್ ಸರ್ಕಾರ ಮತ್ತೆ ಮೂವರು ಭಾರತೀಯರ ಹೆಸರುಗಳನ್ನು ಗೆಜೆಟ್ ಮೂಲಕ ಪ್ರಕಟಿಸಿದೆ.
ಇದರಲ್ಲಿ ಹರಿಯಾಣಾ ಮೂಲದ ಕುಖ್ಯಾತ ಮದ್ಯದ ದೊರೆ ದಿ.ಪಾಂಟಿ ಚಡ್ಡಾನ ಅಳಿಯ ಗುರ್ಜೀತ್ ಸಿಂಗ್ ಕೋಚ್ಚರ್, ಮುಂಬೈ ಮೂಲದ ಉದ್ಯಮಿ ಯಶ್ ಬಿರ್ಲಾ ಮತ್ತು ದಿಲ್ಲಿ ಮೂಲದ ಮಹಿಳಾ ಉದ್ಯಮಿ ಋತಿಕಾ ಶರ್ಮಾ ಸೇರಿದ್ದಾರೆ.
ಎರಡು ದಿನಗಳ ಹಿಮ್ದಷ್ಟೇ ಸ್ವಿಸ್ ಸರ್ಕಾರ ಸ್ನೇಹಲತಾ ಸಾಹಿ ಹಾಗೂ ಸಂಗೀತಾ ಸಾಹಿ ಎಂಬುವರ ಹೆಸರನ್ನು ಬಹಿರಂಗಪಡಿಸಿತ್ತು. ಈಗ ಮತ್ತೆ ಮೂವರ ಹೆಸರನ್ನು ಘೋಷಿಸುವುದರೊಂದಿಗೆ ಒಟ್ಟಾರೆ ಐವರು ಭಾರತೀಯರ ಹೆಸರನ್ನು ಬಹಿರಂಗಪಡಿಸಿದಂತಾಗಿದೆ. ಈ ಹಿಂದೆ ಬಿರ್ಲಾ ಹೆಸರು ಸ್ವಿಸ್ ಎಚ್‌ಎಸ್‌ಬಿಸಿ ಬ್ಯಾಂಕಿಂದ ಸೋರಿಕೆಯಾಗಿದ್ದ ಪಟ್ಟಿಯಲ್ಲೂ ಇತ್ತು. ಆದರೆ ಇವರು ಎಷ್ಟು ಹಣ ಹೊಂದಿದ್ದಾರೆ ಎಂಬ ವಿವರವನ್ನು ಸ್ವಿಸ್ ಸರ್ಕಾರ ನೀಡಿಲ್ಲ.
ಇದೇ ವೇಳೆ ತನ್ನಲ್ಲಿರುವ ಮಾಹಿತಿಯನ್ನು ಭಾರತ ಸರ್ಕಾರದ ಜತೆ ಹಂಚಿಕೊಳ್ಳಬಾರದು ಎಂದು ಬಯಸುವಿರೇ ಆದಲ್ಲಿ 30 ದಿನದೊಳಗೆ ಸ್ವಿಜರ್ಲೆಂಡ್ ನ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವಂತೆ ಇವರಿಗೆ ಸ್ವಿಜರ್ಲೆಂಡ್ ಸರ್ಕಾರ ಸೂಚಿಸಿದೆ. ಸ್ವಿಜರ್ಲೆಂಡ್ ನ ಫೆಡರಲ್ ಗೆಜೆಟ್ ನಲ್ಲಿ ಈ ತಿಂಗಳಲ್ಲಿ ಈವರೆಗೆ 40 ಮಂದಿಯ ಹೆಸರನ್ನು ಬಹಿರಂಗ ಪಡಿಸಲಾಗಿದೆ.