ನವದೆಹಲಿ : ಜೂ.21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾಗೆ ಹೊಸದಾಗಿ ಆಯ್ಕೆಯಾದ ಸಿಬ್ಬಂದಿಗೆ ಯೋಗಾಭ್ಯಾಸ ಕಡ್ಡಾಯ ಮಾಡಲಾಗಿದೆ.
ಸದ್ಯ ತರಬೇತಿ ಪಡೆಯುತ್ತಿರುವ ಪೈಲಟ್ ಗಳು ಮತ್ತು ವಿಮಾನ ಸಿಬ್ಬಂದಿ ಸೋಮವಾರದಿಂದ ಪ್ರತಿದಿನ ಬೆಳಗ್ಗೆ 6.30ಕ್ಕೆ ಯೋಗ ಮಾಡಲೇಬೇಕು ಎಂದು ಸೂಚಿಸಲಾಗಿದೆ. ಒತ್ತಡವನ್ನು ನಿಯಂತ್ರಿಸಲು ಇದು ನೆರವಾಗಲಿದೆ ಎನ್ನುವುದು ವೈಮಾನಿಕ ಸಂಸ್ಥೆಯ ಅಭಿಪ್ರಾಯ. ಏರ್ ಇಂಡಿಯಾವು ಇಂತಹುದೊಂದು ಕ್ರಮಕ್ಕೆ ಮುಂದಾಗಿರುವುದು ಇದೇ ಮೊದಲು.
ಇತ್ತೀಚೆಗಷ್ಟೇ ಸಂಸ್ಥೆಯು 300 ಸಿಬ್ಬಂದಿ ಮತ್ತು 78 ಪೈಲಟ್ ಗಳನ್ನು ನೇಮಕ ಮಾಡಿದ್ದು, ಅವರಿಗೆ ಹೈದರಾಬಾದ್ ನಲ್ಲಿರುವ ಏರ್ ಇಂಡಿಯಾ ಕೇಂದ್ರೀಯ ತರಬೇತಿ ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಇದೇ ವೇಳೆ, ಜನರಲ್ ಮ್ಯಾನೇಜರ್ ಸೇರಿದಂತೆ ಏರ್ಇಂಡಿಯಾದ ಹಿರಿಯ ಅಧಿಕಾರಿಗಳಿಗೆ ಬೆಂಗಳೂರಿನಲ್ಲಿರುವ ಆರ್ಟ್ ಆಫ್ ಲಿವಿಂಗ್ನಲ್ಲಿ 2 ದಿನಗಳ ಕಾರ್ಯಾಗಾರವನ್ನೂ ಏರ್ಪಡಿಸಲಾಗಿದೆ.
ಪ್ರಧಾನಿ ನೇತೃತ್ವದಲ್ಲಿ ಸಾಮೂಹಿಕ ಯೋಗ ಈ ನಡುವೆ, ಜೂ.21ರಂದು ನವದೆಹಲಿಯಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗಾಭ್ಯಾಸ ಮಾಡಲಿದ್ದಾರೆ.
ಬೆಳಗ್ಗೆ 7 ಗಂಟೆಗೆ ಈ 35 ನಿಮಿಷಗಳ ಸಾಮೂಹಿಕ ಯೋಗ ಕಾರ್ಯಕ್ರಮ ನಡೆಯಲಿದ್ದು, 35 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಇದರಲ್ಲಿ ಪಾಲ್ಗೊಳ್ಳುವಂತೆ ಹಿರಿಯ ನಾಗರಿಕ ಸೇವಾ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಜತೆಗೆ, ಸೂಕ್ತ ಯೋಗಾಸನಗಳನ್ನು ಮಾಡಲು ನೆರವಾಗುವಂತೆ ಈಗಾಗಲೇ ಸರ್ಕಾರಿ ಅಧಿಕಾರಿಗಳಿಗೆ ತರಬೇತಿ ಡಿವಿಡಿಗಳು ಮತ್ತು ಪುಸ್ತಿಕೆಗಳನ್ನು ಕಳುಹಿಸಲಾಗಿದೆ.