ನವದೆಹಲಿ : ಮ್ಯಾಗಿಯಲ್ಲಿ ಅಪಾಯಕಾರಿ ಅಂಶಗಳಿವೆ ಎಂಬ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ತನ್ನ 9 ಬಗೆಯ ಉತ್ಪನ್ನಗಳ ಮಾರಾಟವನ್ನು ಭಾರತದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ನೆಸ್ಲೆ ಕಂಪನಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮ್ಯಾಗಿಗೆ ನಿಷೇಧ ಭೀತಿ ಎದುರಾಗಿದೆ.
ನೇಪಾಳ ಸರ್ಕಾರ ಭಾರತದಿಂದ ಮ್ಯಾಗಿ ಆಮದು ಮತ್ತು ಸ್ಥಳೀಯ ಮಾರಾಟವನ್ನು ನಿಷೇಧಿಸಿದ್ದರೆ, ಸಿಂಗಾಪುರ ಕೂಡ ಭಾರತದಿಂದ ಆಮದಾದ ಮ್ಯಾಗಿ ಮಾರಾಟವನ್ನು ನಿಷೇಧಿಸಿದೆ. ಇದೇ ವೇಳೆ, ಮ್ಯಾಗಿಯಲ್ಲಿ ಸೀಸದ ಅಂಶ ಅಪಾಯಕಾರಿ ಮಟ್ಟದಲ್ಲಿದೆಯೇ ಎಂದು ಪರೀಕ್ಷೆ ನಡೆಸುವುದಾಗಿ ಬ್ರಿಟನ್ ಕೂಡ ಘೋಷಿಸಿದೆ.
ಈ ಮಧ್ಯೆ, ಸ್ವಿಜರ್ಲೆಂಡ್ ನಿಂದ ಭಾರತಕ್ಕೆ ಆಗಮಿಸಿರುವ ನೆಸ್ಲೆ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪಾಲ್ ಬುಲ್ಕೆ, ಮ್ಯಾಗಿ ಸಂಪೂರ್ಣ ಸುರಕ್ಷಿತವಾಗಿದೆ. ಆದರೆ, ಗ್ರಾಹಕರು ಆತಂಕಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಗ್ರಾಹಕರ ವಿಶ್ವಾಸ ಗೆದ್ದು ಮತ್ತೆ ಮಾರುಕಟ್ಟೆಗೆ ಬರುತ್ತೇವೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಉತ್ಪಾದನೆಯಾಗುವ ಮ್ಯಾಗಿಯನ್ನು ಆಮದು ಮಾಡಿಕೊಳ್ಳುವ ನೇಪಾಳ ನೆಸ್ಲೆ ಕಂಪನಿಯ ಈ ಪ್ರಸಿದ್ಧ ಆಹಾರಕ್ಕೆ ನಿಷೇಧ ಹೇರಿದೆ. ನಾವು ಖರೀದಿಸುವ ನೂಡಲ್ಸ್ ಅನ್ನು ಉತ್ಪಾದಿಸುವ ದೇಶದಲ್ಲೇ (ಭಾರತ) ಮ್ಯಾಗಿಗೆ ನಿಷೇಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ನೇಪಾಳದಲ್ಲೂ ಮ್ಯಾಗಿಗೆ ತಾತ್ಕಾಲಿಕ ನಿಷೇಧ ಹೇರಿರುವುದಾಗಿ ನೇಪಾಳದ ವಾಣಿಜ್ಯ ಮತ್ತು ಸರಬರಾಜು ನಿರ್ವಹಣೆ ಇಲಾಖೆಯ ಉಪಮಹಾನಿರ್ದೇಶಕ ಕಮಲ್ ಪ್ರಸಾದ್ ಭಟ್ಟಾರೈ ತಿಳಿಸಿದ್ದಾರೆ.
ಮ್ಯಾಗಿಯನ್ನು ಪ್ರಯೋಗಕ್ಕೆ ಒಳಪಡಿಸಲಾಗಿದೆ. ಒಂದು ವೇಳೆ ಅದು ಸೇವನೆಗೆ ಅಪಾಯಕಾರಿ ಎಂದು ಸಾಬೀತಾದಲ್ಲಿ ಶಾಶ್ವತ ನಿಷೇಧ ಹೇರುವುದಾಗಿ ನೇಪಾಳ ಸರ್ಕಾರ ತಿಳಿಸಿದೆ.
ಈ ನಡುವೆ, ಭಾರತದಲ್ಲಿ ಉತ್ಪಾದನೆಯಾಗುವ ಮ್ಯಾಗಿ ನೂಡಲ್ಸ್ ಮಾರಾಟವನ್ನು ಸ್ಥಗಿತಗೊಳಿಸುವಂತೆ ಆಮದುದಾರರಿಗೆ ಸಿಂಗಾಪುರ ಸರ್ಕಾರ ಸೂಚಿಸಿದೆ. ಅಲ್ಪಪ್ರಮಾಣದಲ್ಲಿ ಭಾರತದಿಂದ ಮ್ಯಾಗಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ಮ್ಯಾಗಿ ಓಟ್ ಉತ್ಪನ್ನವನ್ನು ಮಾತ್ರ ತರಿಸಿಕೊಳ್ಳುವುದಿಲ್ಲ. ಮುಂಜಾಗರೂಕತಾ ಕ್ರಮವಾಗಿ ಮ್ಯಾಗಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಪರೀಕ್ಷೆಯಲ್ಲಿ ಅದು ಫೇಲ್ ಆದರೆ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಿಂಗಾಪುರದ ಕೃಷಿ ಆಹಾರ ಪ್ರಾಧಿಕಾರ ತಿಳಿಸಿದೆ.