ಬೆಂಗಳೂರು : ಅಸ್ಸಾಂನಿಂದ ಬಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದ ನಾಲ್ವರು ಬೋಡೋ ಉಗ್ರರನ್ನು ಬಂಧಿಸಿರುವ ಘಟನೆ ಶನಿವಾರ ನಡೆದಿದೆ.
ಶಂಕಿತರು ರಾಜಗೋಪಾಲನಗರದ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಾಜಗೋಪಾಲನಗರ ಮನೆಯ ಮೇಲೆ ಆಂತರಿಕ ಭದ್ರತಾ ದಳ, ಅಸ್ಸಾಂ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಶಂಕಿತ ಐವರು ಬೋಡೋ ಉಗ್ರರನ್ನು ಬಂಧಿಸಲಾಗಿದೆ ಎಂದು ತಿಳಿಸಿದೆ.
ಬಂಧಿತರನ್ನು ತೋನಾರ ಬಸುಮತ್ರಿ, ಸಂಧನ್ ಬಸುಮತ್ರಿ, ನಸೀನ್ ಬಸುಮತ್ರಿ, ಜಿಬಾಲ್ ನಸ್ರರಿ ಎಂದು ಗುರುತಿಸಲಾಗಿದೆ.
ಐಎಸ್ ಡಿ ಡಿವೈಎಸ್ ಪಿ ಸುಬ್ರಹ್ಮಣ್ಯಸ್ವಾಮಿ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಬಂಧಿತ ಬೋಡೊ ಉಗ್ರರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೇ ಕರ್ನಾಟಕದಲ್ಲಿ ಇನ್ನಷ್ಟು ಉಗ್ರರು ಅಡಗಿರುವ ಶಂಕೆಯ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.