ಲಖ್ನೌ : ಪತ್ರಕರ್ತರೊಬ್ಬರನ್ನು ಪೆಟ್ರೋಲ್ ಸುರಿದು ಸಜೀವ ದಹನ ಮಾಡಿದ ಪ್ರಕರಣದ ವಿರುದ್ಧ ಉತ್ತರಪ್ರದೇಶ ಸೇರಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಪ್ರಕೃತಿ ಸಹಜವಾದ ಘಟನೆಗಳನ್ನು ನಾವು ತಡೆಯಲಾಗದು ಎಂದು ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಯುಪಿ ತೋಟಗಾರಿಕೆ ಇಲಾಖೆ ಸಚಿವ ಪರಸುನಾಥ ಯಾದವ್ ವಿವಾದಕ್ಕೀಡಾಗಿದ್ದಾರೆ
ಪ್ರಕರಣದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯಾದವ್, ಪ್ರಕೃತಿ ಸಹಜವಾಗಿ ಹಾಗೂ ವಿಧಿಲೇಲೆಯಂತೆ ಕೆಲವು ಘಟನೆಗಳು ಆಗಾಗ ನಡೆಯುತ್ತಿರುತ್ತದೆ. ಏನು ಮಾಡಲು ಸಾಧ್ಯ ಎಂದು ಹೇಳಿದ್ದಾರೆ.
ಈ ಸಚಿವರ ವಿವಾದಾತ್ಮಕ ಹೇಳಿಕೆ ಭಾರೀ ಟೀಕೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಪತ್ರಕರ್ತ ಜಿತೇಂದ್ರ ಸಿಂಗ್ ಹತ್ಯೆ ಪ್ರಕರಣದಲ್ಲಿ ಸಚಿವ ರಾಮ್ ಮೂರ್ತಿ ವರ್ಮಾ ವಿರುದ್ಧ ಪ್ರಕರಣ ದಾಖಲಾಗಿದ್ದು,ಐವರು ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ.
ಜೂನ್ 1ರಂದು ಸಿಂಗ್ ಮನೆಗೆ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಬೆಂಕಿ ಹಚ್ಚಲಾಗಿತ್ತು. ಬೆಂಕಿಯಲ್ಲಿ ಬೆಂದು ಹೋಗಿದ್ದ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜೂನ್ 08ರಂದು ಸಾವನ್ನಪ್ಪಿದ್ದರು. ಪ್ರಕರಣವನ್ನು ಸಿಬಿಐ ತನಿಖೆ ಒಪ್ಪಿಸಬೇಕೆಂದು ಸಿಂಗ್ ಕುಟುಂಬ ಒತ್ತಾಯಿಸುತ್ತಿದೆ. ಏತನ್ಮಧ್ಯೆ ಸಿಂಗ್ ತಂದೆ ಪ್ರಧಾನಿ ಮೋದಿಗೂ ಪತ್ರ ಬರೆದಿದ್ದಾರೆ.
ಈ ಮಧ್ಯೆ ಶಹಜಹಾನ್ ಪುರ ಜಿಲ್ಲೆಯಲ್ಲಿ ಮತ್ತೋರ್ವ ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಕಳೆದ ಒಂದು ತಿಂಗಳಲ್ಲಿ ಮೂರನೇ ಪತ್ರಕರ್ತನ ಮೇಲೆ ನಡೆದ ಹಲ್ಲೆ ಇದಾಗಿದೆ.
ಫಿಲಿಬಿಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳೀಯ ರಾಜಕಾರಣಿಯೋರ್ವ ಸರ್ಕಾರಿ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರ ಕುರಿತು ಹೈದರ್ ಖಾನ್ ಎಂಬ ಪತ್ರಕರ್ತ ವರದಿ ಬಿತ್ತರಸಿದ್ದ. ಈ ಹಿನ್ನಲೆಯಲ್ಲಿ ಆತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಪ್ರಸ್ತುತ ತೀವ್ರ ಹಲ್ಲೆಗೆ ಗುರಿಯಾಗಿರುವ ಪತ್ರಕರ್ತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.